ಬೆಂಗಳೂರು:- ಮಹಿಳೆಯರಿಗೆ ಶೇ 100ರಷ್ಟು ಮೀಸಲು ಆದೇಶವನ್ನು ಬೆಂಗಳೂರು ಹೈಕೋರ್ಟ್ ರದ್ದುಗೊಳಿಸಿದೆ.
ಸೇನೆಯ ನರ್ಸಿಂಗ್ ಸೇವೆಯಲ್ಲಿ ಶೇಕಡಾ 100ರಷ್ಟು ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಬ್ರಿಟಿಷ್ ಕಾಲದ ಕಾನೂನಿನ ಒಂದು ಭಾಗವನ್ನು ರದ್ದು ಮಾಡಿರುವುದರಿಂದ ಸೇನೆಯ ನರ್ಸಿಂಗ್ನಲ್ಲಿ ಪುರುಷರಿಗೂ ಅವಕಾಶ ಸಿಗುವ ದಿನಗಳು ಹತ್ತಿರವಾಗಿವೆ.
ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ಮೀಸಲಾತಿ ನೀಡುವುದು ಸಂವಿಧಾನದ ಪರಿಚ್ಛೇಧ ಸಮಾನತೆ, ಲಿಂಗ ತಾರತಮ್ಯ ಹಾಗೂ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದು ಅಭಿಪ್ರಾಯ ಪಟ್ಟು 21 ವರ್ಷಗಳ ಹಳೆಯ ಕಾನೂನನ್ನು ರದ್ದುಗೊಳಿಸಿದೆ. ಅಲ್ಲದೆ, ಸಂವಿಧಾನದ ಅಡಿಯಲ್ಲಿ ಮಹಿಳೆಯನ್ನು ಪ್ರತ್ಯೇಕ ವರ್ಗವೆಂದು ಹೇಳಿರುವುದು ನ್ಯಾಯ ಸಮ್ಮತವಾಗಿದೆ. ಆದರೆ, ಈ ಆಶಯವನ್ನು ಈಡೇರಿಸುವುದಕ್ಕಾಗಿ ತಾರ್ಕಿಕವಲ್ಲದ ರೀತಿಯಲ್ಲಿ ಮಹಿಳೆಯರಿಗೆ ಶೇ100ರಷ್ಟು ಮೀಸಲಾತಿ ನೀಡಲಾಗದು ಮತ್ತು ಅದರಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು 1943ರಲ್ಲಿ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದರು. ಅದನ್ನು ಸಂವಿಧಾನದ ಅಡಿಯಲ್ಲಿ ಅಳವಡಿಸಿಕೊಂಡು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಈ ಕಾನೂನು ಸಂವಿಧಾನದ 33ನೇ ಪರಿಚ್ಛೇಧದಂತೆ ಸಂಸತ್ತು ಜಾರಿಗೆ ತಂದಿರುವ ಕಾನೂನನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.