ಬೆಂಗಳೂರು: ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಿಗೆ (Karnataka Assembly Election 2023) ಮತದಾನ ಮುಗಿದಿದ್ದು, ನಾಳೆ (ಮೇ.13) ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆ ನಿನ್ನೆ (ಮೇ.11) ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ರಾಜಕೀಯ ನಾಯಕರು ಇಂದು (ಮೇ.12) ಮತ್ತೆ ಫಾರ್ಮ್ಗೆ ಬಂದಿದ್ದಾರೆ. ರಾಜ್ಯದ ಚುಕ್ಕಾಣಿಯನ್ನು ಹಿಡಿಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಂತ್ರಗಳನ್ನು ಹೆಣೆಯುತ್ತಿವೆ. “ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ” ಎಂಬ ಘೋಷವಾಕ್ಯದಂತೆ ಸರ್ಕಾರ ರಚಿಸಲು ಬಿಜೆಪಿ (BJP) ಯೋಜನೆ ರೂಪಿಸುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿ ಮಂತ್ರಿ ಬಸವರಾಜ ಬೊಮ್ಮಾಯಿಯವರು(Basavaraj Bommai), ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಕುಮಾರಕೃಪಾ ರಸ್ತೆಯ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಚಿವ ಭೈರತಿ ಬಸವರಾಜ, ಸಚಿವ ಮುರುಗೇಶ್ ನಿರಾಣಿ, ಲೆಹರ್ ಸಿಂಗ್, ಎ.ಟಿ. ರಾಮಸ್ವಾಮಿ ಸಾಥ್ ನೀಡಿದ್ದಾರೆ.