ಪಾಕಿಸ್ತಾನದ ಅಡಿಯಾಲ ಜೈಲಿನ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ, ಪಕ್ಷದ ಸ್ಥಾಪಕ(ಇಮ್ರಾನ್)ರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಸರಕಾರ ಮತ್ತು ಪ್ರಬಲ ಮಿಲಿಟರಿ ವ್ಯವಸ್ಥೆಯೇ ಹೊಣೆಯಾಗಲಿದೆ ಎಂದಿದ್ದಾರೆ
`ತನ್ನ ಸಿದ್ಧಾಂತಗಳು ಹಾಗೂ ನಿಲುವಿನ ಜತೆಗೆ ಎಂದಿಗೂ ರಾಜಿ ಮಾಡಿಕೊಳ್ಳದ ಇಮ್ರಾನ್ ಖಾನ್ ಅವರನ್ನು ಸೇನಾಪಡೆ ಅಪಾಯಕಾರಿ ಎಂದು ಭಾವಿಸಿದೆ. ಇದು ಕೇವಲ ಮೂವರು ಶಂಕಿತ ಅಫ್ಘಾನ್ ಭಯೋತ್ಪಾದಕರಿಗೆ ಸಂಬಂಧಿಸಿದ ವಿಷಯವಲ್ಲ. ಇನ್ನೂ ಹಲವು ಉಗ್ರರನ್ನು ಜೈಲಿನೊಳಗೆ ರವಾನಿಸಿರುವ ಭೀತಿಯಿದೆ. ಇಮ್ರಾನ್ ಪ್ರಾಣ ಯಾವಾಗಲೂ ಅಪಾಯದಲ್ಲಿದ್ದು, ಇದು ಇಮ್ರಾನ್ರನ್ನು ಹತ್ಯೆ ಮಾಡಲು ನಡೆದ ಐಎಸ್ಐ ಪ್ರಾಯೋಜಿತ ಕೃತ್ಯವಾಗಿದೆ ಎಂದು ಪಿಟಿಐ ಆರೋಪಿಸಿದೆ.
ಜೈಲಿನ ಮೇಲೆ ಭಯೋತ್ಪಾದಕರ ದಾಳಿ ಎಂದು ಹೇಳುತ್ತಿದ್ದಾರೆ. ಆದರೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಬಂಧನದಲ್ಲಿ ಇಟ್ಟಿರುವ ಜೈಲನ್ನು ಹೊರತುಪಡಿಸಿ ದೇಶದಲ್ಲಿ ಬೇರೆ ಜೈಲುಗಳಿಲ್ಲವೇ ? ಎಂದು ಪಿಟಿಐ ವಕ್ತಾರ ಶೋಯಬ್ ಶಹೀನ್ ಸುದ್ಧಿಗೋಷ್ಠಿ ಯಲ್ಲಿ ಪ್ರಶ್ನೆ ಮಾಡಿದ್ದಾರೆ.
2022ರ ಎಪ್ರಿಲ್ನಲ್ಲಿ ಸಂಸತ್ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಂಡಿದ್ದ ಇಮ್ರಾನ್ ಹಲವು ಪ್ರಕರಣಗಳಲ್ಲಿ ಅಪರಾಧಿಯೆಂದು ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅಡಿಯಾಲ ಜೈಲಿನಲ್ಲಿ ದೀರ್ಘಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜತೆಗೆ, ಭ್ರಷ್ಟಾಚಾರ, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಜನರನ್ನು ಉತ್ತೇಜಿಸಿರುವುದು ಸೇರಿದಂತೆ ಇನ್ನೂ ಸುಮಾರು 170 ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.