ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳು ಸೌದಿ ಅರೇಬಿಯಾದ ನೆಲದಲ್ಲಿ ಇದೇ ಮೊದಲ ಬಾರಿಗೆ ಇಳಿದಿವೆ. ಮೊದಲ ಬಾರಿಗೆ ಭಾರತೀಯ ವಾಯುಪಡೆಯ ವಿಮಾನಗಳು ಸೌದಿ ಅರೇಬಿಯಾ ನೆಲದಲ್ಲಿ ಬಂದಿಳಿದಿದ್ದು, ಫೆಬ್ರವರಿ 26 ರಂದು 8 ಭಾರತೀಯ ಯುದ್ಧ ವಿಮಾನಗಳು ಸೌದಿ ಅರೇಬಿಯಾದ ವಾಯುನೆಲೆಗೆ ಬಂದಿಳಿದವು.
ಇದನ್ನ ‘ಸ್ನೇಹಪರ‘ ಸ್ಟಾಪ್ ಓವರ್ ಎಂದು ಹೇಳಲಾಗುತ್ತಿದೆ. ಇದರ ಅಡಿಯಲ್ಲಿ, ಇಲ್ಲಿನ ವಿಮಾನಗಳಿಗೆ ಇಂಧನ ತುಂಬಿಸಲಾಯಿತು ಮತ್ತು ನಿರ್ವಹಣಾ ತಪಾಸಣೆಗಳನ್ನ ಮಾಡಲಾಯಿತು.
ಇದಕ್ಕೂ ಮೊದಲು ಭಾರತೀಯ ವಾಯುಪಡೆಯ ವಿಮಾನವು ಸೌದಿ ಅರೇಬಿಯಾದ ಯಾವುದೇ ವಾಯುನೆಲೆಯಲ್ಲಿ ಇಳಿದಿರಲಿಲ್ಲ. ಈ ಘಟನೆಯನ್ನ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧದಲ್ಲಿ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕವಾಗಿ, ಸೌದಿ ಅರೇಬಿಯಾ ರಕ್ಷಣೆಯ ವಿಷಯದಲ್ಲಿ ಪಾಕಿಸ್ತಾನಕ್ಕೆ ಹತ್ತಿರದಲ್ಲಿದೆ. ಈ ಕಾರಣಕ್ಕಾಗಿಯೇ ಸೌದಿ ಅರೇಬಿಯಾ ಭಾರತದೊಂದಿಗಿನ ರಕ್ಷಣಾ ಸಂಬಂಧಗಳನ್ನು ಕೆಳದರ್ಜೆಗೆ ಇಳಿಸಿತ್ತು. ಆದರೆ, ಪ್ರಸ್ತುತ ಕಾರ್ಯತಂತ್ರದ ಪರಿಸ್ಥಿತಿಗಳನ್ನು ಗಮನಿಸಿದರೆ, ಸೌದಿ ಅರೇಬಿಯಾ ಭಾರತದೊಂದಿಗಿನ ತನ್ನ ಸಂಬಂಧಗಳನ್ನು ವೇಗವಾಗಿ ಬಲಪಡಿಸುತ್ತಿದೆ.
ಐದು ಮಿರಾಜ್ 2000 ಫೈಟರ್ ಜೆಟ್ ಗಳು, ಎರಡು ಸಿ -17 ಸಾರಿಗೆ ವಿಮಾನಗಳು ಮತ್ತು ಐಎಲ್ -78 ಟ್ಯಾಂಕರ್ ಸೌದಿ ವಾಯುಪಡೆಯ ನೆಲೆಗೆ ಬಂದಿಳಿದ ಭಾರತೀಯ ಜೆಟ್ ಗಳಲ್ಲಿ ಸೇರಿವೆ. ಈ ವಿಮಾನಗಳಲ್ಲಿ 145 ವಾಯು ಯೋಧರು ಸಹ ಇದ್ದರು. ಅವರು ಸೌದಿ ಅರೇಬಿಯಾದ ನೆಲೆಯಲ್ಲಿ ರಾತ್ರಿ ತಂಗಿದರು ಮತ್ತು ಬೆಳಿಗ್ಗೆ ಹೊರಟರು. ಈ ಐತಿಹಾಸಿಕ ಸಂದರ್ಭದಲ್ಲಿ ಭಾರತೀಯ ರಾಯಭಾರಿ ಡಾ.ಸುಹೇಲ್ ಅಜಾಜ್ ಖಾನ್, ರಕ್ಷಣಾ ಕಾರ್ಯದರ್ಶಿ ಕರ್ನಲ್ ಜಿ.ಎಸ್.ಗ್ರೆವಾಲ್ ಅವರು ಭಾರತೀಯ ವಾಯು ಯೋಧರನ್ನು ಭೇಟಿಯಾದರು. ಕೋಬ್ರಾ ವಾರಿಯರ್ಸ್ 23 ಸಮರಾಭ್ಯಾಸದಲ್ಲಿ ಭಾಗವಹಿಸಲು ಭಾರತೀಯ ವಾಯುಪಡೆಯ ತಂಡವು ಫೆಬ್ರವರಿ 27 ರಂದು ಯುಕೆಗೆ ತೆರಳಿತ್ತು.
ಭಾರತೀಯ ವಾಯುಪಡೆಯು ಸೌದಿ ವಾಯುನೆಲೆಗೆ ಬಂದಿಳಿದ ನಂತರ, ಸೌದಿ ಅರೇಬಿಯಾ ತನ್ನ ರಕ್ಷಣಾ ಅಗತ್ಯಗಳಿಗಾಗಿ ಅದನ್ನ ತೊರೆದು ಭಾರತಕ್ಕೆ ಸೇರಬಹುದು ಎಂದು ಪಾಕಿಸ್ತಾನ ಹೆದರಿದೆ.