ಅಮರಾವತಿ: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನ ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದ್ರೆ ಆನ್ಲೈನ್ ಯುಗದಲ್ಲಿ ಪ್ರೀತಿ – ಪ್ರೇಮ ಎಂಬುದು ಕ್ಷಣಿಕ ಸುಃಖವಾಗಿದೆ.
ಬೆಳಗ್ಗೆ ಪ್ರಪೋಸ್ ಮಾಡಿ, ಸಂಜೆ ಹೊತ್ತಿಗೆ ಶೇಕ್ ಹ್ಯಾಂಡ್ ಮಾಡಿ ಬ್ರೇಕಪ್ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬಳು ವಿಧವೆ ತನ್ನ ಪ್ರಿಯಕರ ಕೈಕೊಟ್ಟಿದ್ದಕ್ಕಾಗಿ ಅವನ ಮೇಲೆ ಆಸಿಡ್ ದಾಳಿಗೆ ಮುಂದಾಗಿದ್ದಾಳೆ
44 ವರ್ಷದ ವಿಧವೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆ ದಿನವೇ ಆತನ ಮೇಲೆ ಆಸಿಡ್ ದಾಳಿಗೆ ಯತ್ನಿಸಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ ನಂಡಲೂರಿನಲ್ಲಿ ನಡೆದಿದೆ. ಘಟನೆ ನಂತರ ಯುವಕನ ವಿವಾಹ ಕಾರ್ಯಕ್ರಮ ರದ್ದಾಗಿದೆ. ಆಸಿಡ್ ದಾಳಿ ನಡೆಸಿದ ಆರೋಪಿ ಮಹಿಳೆ ಸಾಫ್ಟ್ವೇರ್ ಎಂಜಿನಿಯರ್ ಜಯಾ. ಈಕೆಗೆ 22 ವರ್ಷದ ಮಗನಿದ್ದಾನೆ. ಇನ್ನೂ ಆಸಿಡ್ ದಾಳಿಗೆ ಒಳಗಾದ ಮಾಜಿ ಪ್ರಿಯಕರ ಶೇಖ್ ಸೈಯದ್ (32), ಮದುವೆಯಾಗಲು ತಯಾರಾಗಿದ್ದ. ತನ್ನೊಂದಿಗೆ ಎಲ್ಲಾ ಮುಗಿದ ಮೇಲೆ ಕೈಕೊಟ್ಟನೆಂದು ಆಸಿಡ್ ದಾಳಿಗೆ ಮುಂದಾಗಿದ್ದಾಳೆ.
ಸಯ್ಯದ್ ಮತ್ತು ಜಯಾ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಕಳೆದ 3 ವರ್ಷಗಳಲ್ಲಿ ಸೈಯ್ಯದ್ ಡ್ರೈವರ್ ಕೆಲಸಕ್ಕಾಗಿ ಕುವೈತ್ಗೆ ತೆರಳಿದ್ದ. ಭಾರತಕ್ಕೆ ಮರಳಿದ ನಂತರ ಜಯಾಳ ಸಂಪರ್ಕವನ್ನು ಬಿಟ್ಟು, ಇದೇ ಆಗಸ್ಟ್ 11ರಂದು ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಮದುವೆ ನಿಲ್ಲಿಸುವ ಸಲುವಾಗಿ ಜಯಾ ಕೂಡ ಅಲ್ಲಿಗೆ ಬಂದಿದ್ದಳು. ಆದ್ರೆ ಸಯ್ಯದ್ ಆಕೆಯೊಂದಿಗೆ ಇರಲ್ಲ ಎಂದು ಹೇಳಿದ. ಇದರಿಂದ ಕೋಪಗೊಂಡ ಮಹಿಳೆ ಬಾತ್ರೂಮ್ ಕ್ಲೀನರ್ ಆಸಿಡ್ ತಂಡು ಅವನ ಮೇಲೆ ಎರಚಿದ್ದಾಳೆ. ಆದ್ರೆ ಅವನು ತಪ್ಪಿಸಿಕೊಂಡಿದ್ದರಿಂದ ಸಯ್ಯದ್ ಚಿಕ್ಕಮ್ಮನಿಗೆ ಆಸಿಡ್ ತಾಗಿದೆ. ಇದೇ ಕೋಪದಿಂದ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸಯ್ಯದ್ ಜಯಾಳಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.