ಪಾಟ್ನಾ:- ಡಿಜೆ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ವಿದ್ಯುದಾಘಾತದಿಂದ ಸುಮಾರು 8 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡ ಘಟನೆ ಬಿಹಾರದ ಹಾಜಿಪುರ ಜಿಲ್ಲೆಯ ಸುಲ್ತಾನ್ಪುರ ಗ್ರಾಮದಲ್ಲಿ ಜರುಗಿದೆ.
ಹರಿಹರನಾಥ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರ ಮೆರವಣಿಗೆ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮೃತರನ್ನು ಕನ್ವರ್ ಯಾತ್ರಾರ್ಥಿಗಳು ಎಂದು ಗುರುತಿಸಲಾಗಿದೆ. ಮೃತರು ಹಾಜಿಪುರದ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸುಲ್ತಾನ್ಪುರದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರಾವಣ ಮಾಸದ ಹಿನ್ನಲೆಯಲ್ಲಿ ಈ ಗ್ರಾಮದ ಯುವಕರು ಪ್ರತಿ ಸೋಮವಾರ ಹರಿಹರನಾಥ ದೇವಸ್ಥಾನಕ್ಕೆ ಜಲಾಭಿಷೇಕ ಮಾಡಲು ಮೆರವಣಿಗೆ ಮೂಲಕ ತೆರಳುವುದು ವಾಡಿಕೆ. ಅದರಂತೆ ಇಂದು ಈ ಯುವಕರ ತಂಡ ಟ್ರ್ಯಾಕ್ಟರ್ ಟ್ರಾಲಿಗೆ ದೊಡ್ಡ ದೊಡ್ಡ ಸೌಂಡ್ ಬಾಕ್ಸ್ ಅಳವಡಿಸಿ ಡಿಜೆ ವ್ಯವಸ್ಥೆ ಮಾಡಿದ್ದರು. ಈ ಟ್ರ್ಯಾಕ್ಟರ್
ಚಲಿಸುವಾಗ ರಸ್ತೆಯಲ್ಲಿದ್ದ ಹೈಟೆನ್ಷನ್ ತಂತಿಗೆ ತಗುಲಿ ಅಪಘಡ ಸಂಭವಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ʼʼವೈಶಾಲಿ ಜಿಲ್ಲೆಯ ಹಾಜಿಪುರ-ಜಂಡಾಹಾ ರಸ್ತೆಯ ನೈಪರ್ ಗೇಟ್ ಬಳಿಯ ಚೌಹರ್ಮಲ್ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಹಾಜಿಪುರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.