ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಹೊಳೆಗಂಗೂರು ಗ್ರಾಮದಲ್ಲಿ ಸೋಮವಾರ ಸಂಜೆ ನೀರಿನ ತೊಟ್ಟಿಗೆ ಬಿದ್ದಿದ್ದ ಹಸುವೊಂದನ್ನು ಭದ್ರಾವತಿ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಹೊಳೆಗಂಗೂರು ಗ್ರಾಮದಲ್ಲಿ ಹೊಸದಾಗಿ ಮನೆ ಕಟ್ಟುತ್ತಿದ್ದು ಅದಕ್ಕಾಗಿ ಎಂಟು ಅಡಿ ಆಳದ ಸಂಪ್ ನಿರ್ಮಾಣ ಮಾಡಲಾಗಿತ್ತು. ಅದರ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ಅಡಕೆ ದಬ್ಬೆ ಹಾಕಿ ಮುಚ್ಚಲಾಗಿತ್ತು.
ಮಾಮೂಲಿಯಂತೆ ಕೊಟ್ಟಿಗೆಗೆ ಹೋಗಬೇಕಿದ್ದ ಹಸು ಅಕಸ್ಮಾತ್ ಸಂಪ್ ಮೂಲಕ ಹೊರಟಿದೆ. ಅಡಕೆ ದೆಬ್ಬೆ ಮೇಲೆ ಕಾಲಿಟ್ಟ ಪರಿಣಾಮ ಏಕಾಏಕಿ ಗುಂಡಿಗೆ ಬಿದ್ದಿದೆ. ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಹಸುವಿಗೆ ಬೆಲ್ಟ್ ಕಟ್ಟಿ ಜೆಸಿಬಿ ಸಹಾಯದಿಂದ ಮೇಲಕ್ಕೆ ಎತ್ತಿದ್ದಾರೆ.
ಹಸುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆರೋಗ್ಯದಿಂದ ಇದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಎಸ್ಎಸ್ಒ ಹುಲಿಯಪ್ಪ, ಸಿಬ್ಬಂದಿ ಅಶೋಕ್ ಕುಮಾರ್, ಶೇಖರ್, ಸುರೇಶ್, ರಾಜ ನಾಯಕ್ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.