ಮೈಸೂರು: ಮೈಸೂರಲ್ಲಿ ಪ್ರಧಾನಿ ಮೋದಿಯವರು ರೋಡ್ ಶೋ ಮಾಡಿದ್ದ ರಸ್ತೆಯು ಅಪವಿತ್ರವಾಗಿದೆ ಎಂದು ಕಾಂಗ್ರೆಸ್ ಕಾರ್ಯರ್ತರು, ಸಗಣಿ, ಗಂಜಲ ಹಾಕಿ ತೊಳೆದು ಸ್ವಚ್ಛ ಮಾಡಿದ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತರು ಮೋದಿಯವರು ರೋಡ್ ಶೋ ಮಾಡಿ ದಸರಾ ಮೆರವಣಿಗೆ ರಾಜ ಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಕಿಡಿಕಾರಿದರು. ಬಳಿಕ ಅವರೇ ರಸ್ತೆ ಶುದ್ಧಿ ಮಾಡಿದ್ದಾರೆ. ಗಂಜಲ, ಸಗಣಿ ನೀರಿನಿಂದ ರಾಜ ಮಾರ್ಗವನ್ನ ಶುಚಿಗೊಳಿಸಿದ್ದಾರೆ. ಮೈಸೂರಿನ ಕೆ.ಆರ್ ವೃತ್ತ, ಸಯ್ಯಾಜೀರಾವ್ ರಸ್ತೆಯನ್ನ ಕೈ ಕಾರ್ಯಕರ್ತರು ಶುದ್ಧಿ ಮಾಡಿದ್ದಾರೆ.
ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ. ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರ, ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ, ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು ಅಪಶಕುನ. ಇದರಿಂದಾಗಿಯೇ ಬಿಜೆಪಿ ಸೋತಿದೆ. ನಮ್ಮ ಮೈಸೂರು ಪವಿತ್ರವಾಗಿರಬೇಕು ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗುತ್ತಾ ರಸ್ತೆ ಶುಚಿಗೊಳಿಸಿದ್ದಾರೆ.
ಹಳೇ ಮೈಸೂರು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಮೋದಿ, ಸಾಂಸ್ಕೃತಿಕ ನಗರಿಯಲ್ಲಿ 4.3 ಕಿಲೋಮೀಟರ್ ರೋಡ್ ಶೋ ನಡೆಸಿದ್ದರು. ಏ.30 ರಂದು ಮೈಸೂರಿನ ಗನ್ಹೌಸ್ ವೃತ್ತದಿಂದ ಹೈವ್ ವೃತ್ತದ ವರೆಗೆ ಮೋದಿ ರೋಡ್ ಶೋ ಮಾಡಿದ್ದರು. ಅಂದು ಮೈಸೂರಿನ ಓವಲ್ ಮೈದಾನಕ್ಕೆ ಆಗಮಿಸಿದ ಮೋದಿ ಕಾರಿನ ಮೂಲಕ ಮೈಸೂರು ವಿವಿ ಕ್ರಾಫರ್ಡ್ ಹಾಲ್ಗೆ ತೆರಳಿದ್ದರು. ವಿದ್ಯಾಪೀಠ ವೃತ್ತದಲ್ಲಿ ನಿಂತಿದ್ದ ತೆರೆದ ವಾಹನ ಏರಿದ ಮೋದಿಯನ್ನು ಸಚಿವ ರಾಮದಾಸ್ ಮೈಸೂರು ಪೇಟ ಹಾಗೂ ಕೇಸರಿ ಶಾಲು ತೊಡಿಸಿ ಸ್ವಾಗತಿಸಿದ್ದರು. ಮೋದಿ ಜೊತೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆಎಸ್ ಈಶ್ವರಪ್ಪ, ಎಸ್ ಎ ರಾಮದಾಸ್ ತೆರದ ವಾಹನದ ಮೂಲಕ ರೋಡ್ ಶೋನಲ್ಲಿ ಪಾಲ್ಗೊಂಡರು. ಮೋದಿ ರೋಡ್ ಶೋ ನೋಡಲು ಜನಸಾಗರವೇ ಹರಿದು ಬಂದಿತ್ತು. ಕಲಾ ತಂಡಗಳ ಪ್ರದರ್ಶನ ರೋಡ್ ಶೋ ಮೆರುಗು ಹೆಚ್ಚಿಸಿತ್ತು. ನಮ್ಮ ಮೋದಿ ನಮ್ಮ ಹೆಮ್ಮೆ ಸೇರಿದಂತೆ ಹಲವು ಪ್ಲಕಾರ್ಡ್ಗಳು, ಮೋದಿ ಮೋದಿ ಜಯಘೋಷ ಮೊಳಗಿತ್ತು.