ಬೀದರ್ (ಏ.21): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗೋವಿಂದತಾಂಡ, ಮೀನಕೇರಾ, ಕೋಳಾರ, ಬಸಲಾಪೂರ, ಪೊಲಕಪಳ್ಳಿ, ಬಗದಲ್, ಸಂಗೊಳಗಿ, ಗೋರನಳ್ಳಿ, ಯಾಕಾತಾಪೂರ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಮುಖರು, ಯುವಕರು ನೂರಾರು ಸಂಖ್ಯೆಯಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಸುಮಾರು 09ಕ್ಕೂ ಹೆಚ್ಚು ಗ್ರಾಮಗಳ ವಿವಿಧ ಪಕ್ಷದ ಪ್ರಮುಖರು, ನೂರಾರು ಜನ ಯುವಕರು, ಮುಖಂಡರಿಗೆ ಶುಕ್ರವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಪ್ರಮುಖರಾಗಿದ್ದ ಅನೇಕ ಜನ ಹಿರಿಯರು, ಯುವಕರು, ಮುಖಂಡರು, ಮಹಿಳೆಯರು ಪ್ರತಿನಿತ್ಯ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ತರಬೇಕು ಎಂದು ರಾಜ್ಯದ ಜನರು ತೀರ್ಮಾನಿಸಿದ್ದಾರೆ. ಪ್ರತಿನಿತ್ಯ ಸಾವಿರಾರು ಜನರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನಾವು ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇವೆ. ಈ ಬಾರಿ ಅಧಿಕಾರಕ್ಕೆ ಬಂದರೆ ಮಾಡಲಿರುವ ಜನಪರ ಕೆಲಸಗಳ ಬಗ್ಗೆ ಕೂಡ ತಿಳಿಸಿದ್ದೇವೆ. ಪಕ್ಷದ ಮುಖಂಡರು, ಕಾರ್ಯಕರ್ತರು ಅವುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕು. ಮನೆಮನೆಗೂ ನಮ್ಮ ಪಕ್ಷದ ಗುರಿ ಮತ್ತು ಉದ್ದೇಶಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನೂತನವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಸೇರಿದ ಅಶೋಕ್ ರೆಡ್ಡಿ ಪೊಲಕಪಳ್ಳಿ, ಭೀಮಷಾ ಕತ್ರಿ ಬಸಲಾಪೂರ, ಬಸವರಾಜ್ ಹುಡ್ಗಿ ಬಗದಲ್, ಕೇಶವ್ ರಾವ್ ಪಾಟೀಲ್, ಶಂಕರರಾವ್ ಪಾಟೀಲ್, ಸುನೀಲ್ ಕುಮಾರ್, ಅಜಯ್ ದೊಡ್ಡಮನಿ, ರಾಕೇಶ್ ಜಟಗೊಂಡ, ಪ್ರಜ್ವಲ್ ದೊಡ್ಡಮನಿ ಪ್ರಮುಖರಾದ ಗಣಪತಿ ಶಂಭು, ಮಹೇಶ್ ಚಿಂತಾಮಣಿ, ಚನ್ನಮಲ್ಲಪ್ಪ ಹಜ್ಜರಗಿ, ರಾಜಶೇಖರ ಜವಳೆ ಸೇರಿದಂತೆ ಅನೇಕರಿದ್ದರು.