ಗ್ಯಾಂಗ್ಟಾಕ್: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತಮ್ಮ ರಾಜ್ಯದಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳ ಹೆರಿಗೆ ರಜೆ ಹಾಗೂ ಮಗುವಿನ ತಂದೆಗೆ 1 ತಿಂಗಳ ರಜೆ ನೀಡುವ ಹೊಸ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವುದಾಗಿ ಬುಧವಾರ ತಿಳಿಸಿದ್ದಾರೆ.
ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (SSCSOA) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರಿ ಉದ್ಯೋಗಿಗಳಿಗೆ ಈ ಹೊಸ ಪ್ರಯೋಜನವನ್ನು ಶೀಘ್ರವೇ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಇದು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಾಯ ಮಾಡಲಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಹೆರಿಗೆ ಪ್ರಯೋಜನ ಕಾಯಿದೆ 1961ರ ಪ್ರಕಾರ ಕೆಲಸ ಮಾಡುವ ಮಹಿಳೆ 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹಳಾಗಿರುತ್ತಾಳೆ. ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ, ಭಾರತದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಸುಮಾರು 6.32 ಲಕ್ಷ ಜನರು ನೆಲೆಸಿದ್ದಾರೆ.
ಸಿಕ್ಕಿಂ ಮತ್ತು ರಾಜ್ಯದ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು. ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿ ಪ್ರಕ್ರಿಯೆ ಚುರುಕುಗೊಳಿಸುವತ್ತ ಗಮನ ಹರಿಸಲಾಗಿದ್ದು, ಬಡ್ತಿ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ತಮಾಂಗ್ ಹೇಳಿದರು.