ಯಾವುದೆ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಸಧ್ಯಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಒಪ್ಪಿಗೆ ನೀಡುವಂತೆ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.
ಸಚಿವರ ಒತ್ತಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ ವರ್ಷ ವರ್ಗಾವಣೆ ವಿಚಾರವಾಗಿ ಸರ್ಕಾರದ ವಿರುದ್ಧ ಟೀಕೆಗಳು ಬಂದಿದ್ದು, ಹೀಗಾಗಿ ಈ ವಿಚಾರವನ್ನು ಕೈಗೆತ್ತಿಕೊಳ್ಳದಿರುವುದು ಜಾಣತನ. ಈ ವಿಷಯ ಇಲ್ಲಿಗೆ ಬಿಟ್ಟು ಬಿಡಿ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ವರ್ಗ-1 ಮತ್ತು ಇದರ ಮೇಲಿನ ಅಧಿಕಾರಿಗಳ ವರ್ಗಾವಣೆಯನ್ನು ಸಿಎಂ ನಿರ್ವಹಿಸುತ್ತಾರೆ, ಆದರೆ ಕೆಳ ಹಂತದ ಅಧಿಕಾರಿಗಳ ವರ್ಗಾವಣೆಯನ್ನು ಸಚಿವರು ಮತ್ತು ಶಾಸಕರು ನಡೆಸುತ್ತಾರೆ.
ಪ್ರತಿ ವರ್ಷ ಮೇ ಮತ್ತು ಜೂನ್ ಅವಧಿಯಲ್ಲಿ ಸುಮಾರು ಶೇ 6 ರಿಂದ 8 ರಷ್ಟು ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಸರ್ವೆ ಸಾಮಾನ್ಯ. ಆದರೆ, ಈ ವರ್ಷ ಜೂನ್ 6 ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರವು ವರ್ಗಾವಣೆ ಮಾಡಿಲ್ಲ. ಚುನಾವಣಾ ಫಲಿತಾಂಶದ ನಂತರ ಅಧಿಕಾರಿಗಳ ವರ್ಗಾವಣೆಗೆ ಭಾರಿ ಒತ್ತಡ ಹಾಕಲಾಗುತ್ತಿದೆ.