ಬೆಂಗಳೂರು: “ನಮ್ಮ ಮೆಟ್ರೋ ದೇಶದ ಇತರೇ ಭಾಗಗಳ ಮೆಟ್ರೋಗಳಿಗಿಂತ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು, 2ನೇ ಹಂತದ ರೀಚ್- 6 ಮೆಟ್ರೋ ಮಾರ್ಗ 2025 ರ ವೇಳೆಗೆ ಲೋಕಾರ್ಪಣೆಯಾಗಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಾಗವಾರ ಮುಖ್ಯರಸ್ತೆಯ ಕೆ. ಜಿ. ಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸುರಂಗ ಕೊರೆದು ಯಂತ್ರ ಹೊರಬರುವ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಮಾಧ್ಯಮಗಳಿಗೆ ಅವರು ಹೇಳಿದ್ದಿಷ್ಟು;
“ಈ ಮಾರ್ಗದಲ್ಲಿ ಒಟ್ಟು 13.76 ಕಿ.ಮೀ ಉದ್ದ ಸುರಂಗ ಇರಲಿದ್ದು. ಡೈರಿ ವೃತ್ತದಿಂದ ನಾಗಾವರದ ತನಕ 12 ನಿಲ್ದಾಣಗಳು ಬರಲಿವೆ. ಕಾಳೇನ ಅಗ್ರಹಾರದಿಂದ ನಾಗಾವರದ ತನಕ ಈ ಮಾರ್ಗವು ಒಟ್ಟು 21.26 ಕಿಮೀ ಉದ್ದವಿದೆ.
9 ಸುರಂಗ ಕೊರೆಯುವ ಯಂತ್ರಗಳು ಈಗ ಕಾರ್ಯನಿರ್ವಹಿಸುತ್ತಿದ್ದು, 7 ಕಡೆಗಳಲ್ಲಿ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಒಟ್ಟು 12 ನಿಲ್ದಾಣಗಳಿದ್ದು, ಶೇ 75 ರಷ್ಟು ಕಾಮಗಾರಿ ಮುಗಿದಿದೆ.
ಈ ಹಂತದ ಮೆಟ್ರೋ ಕಾಮಗಾರಿ ಜವಾಬ್ದಾರಿಯನ್ನು ಅಬ್ಕಾಮ್, ಎಲ್ ಅಂಡ್ ಟಿ ಮತ್ತು ಐಟಿಡಿ ಸಂಸ್ಥೆಗಳು ಗುತ್ತಿಗೆ ತೆಗೆದುಕೊಂಡಿವೆ. ಪ್ರಸ್ತುತ ಐಟಿಡಿ ಸಂಸ್ಥೆ ಗುತ್ತಿಗೆ ತೆಗೆದುಕೊಂಡಿರುವ ಭಾಗದಲ್ಲಿ ಸುರಂಗ ಕೊರೆಯುವ ಕೆಲಸವನ್ನು ವೀಕ್ಷಿಸಲಾಯಿತು.
ಜಯದೇವ ಬಳಿ ರೀಚ್ – 6, ಎಂ.ಜಿ ರಸ್ತೆಯ ಬಳಿ ಇಂಟರ್ ಚೇಂಜ್, ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ, ನಾಗವಾರ ಇಂಟರ್ಚೇಂಜ್ ನಿಲ್ದಾಣಗಳು ಈ ಭಾಗದ ಪ್ರಮುಖ ನಿಲ್ದಾಣಗಳಾಗಿವೆ.
ನಮ್ಮ ಮೆಟ್ರೋ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡಿದೆ. ದೆಹಲಿಗಿಂತ ಉತ್ತಮವಾದ ಕೆಲಸ ನಮ್ಮಲ್ಲಿ ನಡೆದಿದೆ. ಯಾವುದೇ ಹಂತದಲ್ಲೂ ಕೆಲಸದ ಗುಣಮಟ್ಟದಲ್ಲಿ ರಾಜಿಯಾಗಿಲ್ಲ.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ಮಾಡುವ ಆಲೋಚನೆ ನಮ್ಮ ಮುಂದಿದೆ. ಆದ ಕಾರಣ ಎಷ್ಟು ಆಳ ಹೋಗಬೇಕಾಗುತ್ತದೆ. ಈ ಕಾರ್ಯ ಮಾಡಲು ಏನಾದರೂ ಅಡಚಣೆ ಉಂಟಾಗುತ್ತದೆಯೇ, ಸವಾಲುಗಳು ಏನು ಬರಬಹುದು ಎಂದು ತಿಳಿದುಕೊಳ್ಳಲು ಖುದ್ದಾಗಿ ಕಾಮಗಾರಿ ವೀಕ್ಷಣೆಗೆ ಬಂದಿದ್ದೇನೆ.”
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಬಗ್ಗೆ ಸಾರ್ವಜನಿಕ ಚರ್ಚೆ ಏರ್ಪಟ್ಟಿದೆ ಎನ್ನುವ ಪ್ರಶ್ನೆಗೆ “ಈಗಾಲೇ ಕಾಮಗಾರಿ ವೇಗದಿಂದ ಸಾಗುತ್ತಿದೆ. ಪಿಲ್ಲರ್ಗಳನ್ನು ಹಾಕದೆ ಇರುವ ಕಡೆ ಎರಡು ಹಂತಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಮೇಲಿನ ಹಂತದಲ್ಲಿ ಮೆಟ್ರೋ ಕೆಳಗಿನ ಹಂತದಲ್ಲಿ ರಸ್ತೆ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಈ ಆಲೋಚನೆಯನ್ನು ಅನುಷ್ಠಾನ ಮಾಡುವಂತೆ ತಿಳಿಸಿದ್ದೇನೆ.