ನವದೆಹಲಿ: 2024 ಜನವರಿ 22 ರಂದು ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿರುವ (Ayodhya) ರಾಮಮಂದಿರ (Sri Ram Mandir) ಉದ್ಘಾಟನೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅಧಿಕೃತ ಆಹ್ವಾನ ನೀಡಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ನರೇಂದ್ರ ಮೋದಿ, ಇಂದು ನನಗೆ ಅತ್ಯಂತ ಭಾವನಾತ್ಮಕ ದಿನವಾಗಿದೆ. ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಅಧಿಕಾರಿಗಳು ನನ್ನ ನಿವಾಸಕ್ಕೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದರು. ನಾನು ತುಂಬಾ ಧನ್ಯನಾಗಿದ್ದೇವೆ. ನನ್ನ ಜೀವನದಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಮೋದಿ ತಿಳಿಸಿದ್ದಾರೆ.
2019ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ನಂತರ ಕೇಂದ್ರವು ದೇವಾಲಯ ನಿರ್ಮಾಣ ಹಂತದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅನ್ನು ಸ್ಥಾಪಿಸಿತು. 2020ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು. ಸದ್ಯ ಟ್ರಸ್ಟ್ನ ಮೇಲ್ವಿಚಾರಣೆಯಲ್ಲಿ ದೇವಾಲಯ ನಿರ್ಮಾಣದ ಕೆಲಸ ಸ್ಥಿರವಾದ ವೇಗದಲ್ಲಿ ಸಾಗುತ್ತಿದೆ