ಬೆಂಗಳೂರು: ಕೊಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ ಹಾಗೂ ಪ್ರಧಾನಿಗಳಾದ ಮೋದಿಯವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಕೃತಜ್ಞತೆಗಳು ಹಾಗೂ ಅಭಿನಂದನೆಗಳು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪೋಸ್ಟ್ ಮಾಡಿದ್ದಾರೆ.
ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಂತೆ ರಾಜ್ಯ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಕೂಡ ಈ ಬಗ್ಗೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸರ್ಕಾರ, 2023-24 ಮಾರುಕಟ್ಟೆ ಋತುವಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮಿಲ್ಲಿಂಗ್ ಕೊಬರಿಗೆ 300 ರೂ. ಹಾಗೂ ಉಂಡೆ ಕೊಬರಿಗೆ 250 ರೂ. (ಪ್ರತಿ ಕ್ವಿಂಟಾಲ್ಗೆ) ಏರಿಕೆ ಮಾಡಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ.ಡಿಸೆಂಬರ್ 21ರಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡ ಅವರ ನೇತೃತ್ವದಲ್ಲಿ ಪ್ರಧಾನಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೊಬರಿ ರೈತರ ಸಂಕಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾನ್ಯ ಪ್ರಧಾನಿಗಳು ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ತೆಂಗು ಬೆಳೆಗಾರರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ನೆರವು ಬೇಕಿದೆ. ಮಧ್ಯವರ್ತಿಗಳು ಅವರನ್ನು ಕಿತ್ತು ತಿನ್ನುತ್ತಿದ್ದಾರೆ. ಇದು ಎಲ್ಲೆಡೆ ಕಂಡು ಬರುತ್ತಿರುವ ನೈಜ ಚಿತ್ರಣ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ನಾಫೆಡ್ ಮೂಲಕವೇ ಕೊನೆಪಕ್ಷ ರಾಜ್ಯದಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಕೊಬರಿ ಖರೀದಿಸಬೇಕು ಎಂದು ಕೇಂದ್ರವನ್ನು, ಮಾನ್ಯ ಪ್ರಧಾನಿಗಳಲ್ಲಿ ವಿನಂತಿಸುತ್ತೇನೆ.
#ಕೊಬರಿ #ಬೆಂಬಲ_ಬೆಲೆ