ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಸೂಕ್ತ ತನಿಖೆಗಾಗಿ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.
ತನಿಖೆಗಾಗಿ ಟ್ರಾಫಿಕ್ ಪೊಲೀಸರಿಗೆ ಅವಕಾಶ ನೀಡುವಂತೆ ಪೊಲೀಸ್ ಇಲಾಖೆಯು ಗೃಹ ಇಲಾಖೆಗೆ ಪತ್ರ ಬರೆದಿದೆ.
ರೋಡ್ ರೇಜ್ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆ ಕೂಡ ಶತಪ್ರಯತ್ನ ಮಾಡುತ್ತಿದೆ. ಜೊತೆಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇದನ್ನು ಗೂಂಡಾ ಆಕ್ಟ್ ಎಂದು ಪರಿಗಣನೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೂ ದಿನಕ್ಕೆ ಐದಾರು ಪ್ರಕರಣಗಳು ವರದಿಯಾಗುತ್ತಿದೆ. ನಗರದಲ್ಲಿರುವ ಭಾರೀ ಟ್ರಾಫಿಕ್ ಜಾಮ್ ಇದಕ್ಕೆ ಪ್ರಮುಖ ಕಾರಣವಾಗಿದೆ.
ಸದ್ಯ ರೋಡ್ ರೇಜ್ ಪ್ರಕರಣಗಳನ್ನು ತಡೆಯುವ ಕೆಲಸವನ್ನು ಟ್ರಾಫಿಕ್ ಪೊಲೀಸರಿಗೆ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಲಾ ಅಂಡ್ ಆರ್ಡರ್ ಪೊಲೀಸರಿಗೆ ದೂರು ಕೊಟ್ಟರೆ ಅವರು ಎಫ್ಐಆರ್ ದಾಖಲಿಸಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸಬೇಕಿದೆ. ಇದಕ್ಕೆಲ್ಲಾ ಅಲ್ಲಿನ ಟ್ರಾಫಿಕ್ ಪೊಲೀಸರ ಸಹಾಯಬೇಕಾಗುತ್ತದೆ. ಹಾಗಾಗಿ ಭಾರತೀಯ ನ್ಯಾಯ ಸಂಹಿತೆಯ 132, 118 ಅಡಿಯಲ್ಲಿ ತನಿಖೆ ನಡೆಸಲು ಅವಕಾಶ ನೀಡುವಂತೆ ಗೃಹ ಇಲಾಖೆಗೆ ಪತ್ರ ಬರೆಯಲಾಗಿದ್ದು, ಅವಕಾಶ ಸಿಕ್ಕರೆ ಟ್ರಾಫಿಕ್ ಪೊಲೀಸರು ರೋಡ್ ರೇಜ್ ಪ್ರಕರಣಗಳ ತನಿಖೆ ನಡೆಸಲಿದ್ದಾರೆ.