ಬೆಂಗಳೂರು: ನಗರದಲ್ಲೆಡೆ ಈ ಅವಧಿಯಲ್ಲಿ ರಸ್ತೆಗಳಲ್ಲಿ ರಾಶಿರಾಶಿ ಮಾವಿನಹಣ್ಣು ಕಾಣಬಹುದಿತ್ತು. ವಾಹನಗಳಲ್ಲಿ ತಂದು ಮಾರಾಟ ಮಾಡುವ ದೃಶ್ಯಗಳೂ ಕಾಣ ಸಿಗುತ್ತಿತ್ತು. ಮನೆಗಳಲ್ಲಿ ಮಾವಿನ ಖಾದ್ಯಗಳಿಗೆ ಪ್ರಮುಖ ಸ್ಥಾನ ಇರುತ್ತಿತ್ತು. ಆದರೆ, ಈ ಬಾರಿ ದುಬಾರಿ ದರದಿಂದಾಗಿ ಮಾವಿನ ಹಣ್ಣು ಸಾಮಾನ್ಯರ ಕೈಗೆಟುಕುತ್ತಿಲ್ಲ. ಹಣ್ಣಿನ ಸೀಸನ್ನಲ್ಲಿ ಒಂದು ಕೆ.ಜಿ. ಮಾವು 60 ರೂ. ನಿಂದ 120 ರೂ.ವರೆಗೆ ಇರುತ್ತದೆ. ಆದರೆ ಈಗ 100-300 ರೂ. ತಲುಪಿದೆ. ಹೀಗಾಗಿ ಮಾರುವವರು, ಕೊಳ್ಳುವವವರ ಸಂಖ್ಯೆಯೂ ಕಡಿಮೆ ಇದೆ.
‘ರಾಜ್ಯದಲ್ಲಿ ಏರು ಹಂಗಾಮಿನಲ್ಲಿ 15 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಇಳಿ ಹಂಗಾಮಿನಲ್ಲಿ 8 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಈ ಬಾರಿ ಆರಂಭದಲ್ಲಿ ಮಾವಿನ ಮರಗಳು ಸಾಕಷ್ಟು ಹೂ ಬಿಟ್ಟಿದ್ದವು. ಉತ್ತಮ ಫಸಲಿನ ನಿರೀಕ್ಷೆಯೂ ಇತ್ತು. ಹವಾಮಾನ ವೈಪರಿತ್ಯದಿಂದ ಹೂ, ಕಾಯಿಗಳು ಉದುರಿದ್ದು, ರಾಮನಗರ ಹೊರತುಪಡಿಸಿದರೆ, ಇತರೆ ಜಿಲ್ಲೆಗಳಲ್ಲಿ ಮಾವು ಫಸಲು ಬಹುತೇಕ ಕುಂಠಿತವಾಗಿದೆ.
ಮಾರುಕಟ್ಟೆಗೆ ಬರುತ್ತಿರುವ ಮಾವು ಈ ಬಾರಿ ಹೆಚ್ಚು ಗಾತ್ರ ಹೊಂದಿಲ್ಲ. ಎಂದಿನಂತೆ ರುಚಿಯಾದ ಹಣ್ಣುಗಳ ಪ್ರಮಾಣವೂ ಕಡಿಮೆಯಿದೆ. ನೀರಾವರಿ ವ್ಯವಸ್ಥೆಯುಳ್ಳವರು ಈಗ ಮರದಲ್ಲಿರುವ ಮಾವು ಉಳಿಸಿ, ರಕ್ಷಿಸಿಕೊಂಡರೆ ಮಾತ್ರ ಶೇ.20-30 ರಷ್ಟು ಬೆಳೆ ಸಿಗುತ್ತದೆ. ಇಲ್ಲದಿದ್ದರೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ.