ಬೆಂಗಳೂರು: ಬೆಂಗಳೂರಿನ ಮೆಟ್ರೋ-ಕ್ಯೂಆರ್ ಕೋಡ್(Namma metro) ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನವೆಂಬರ್ನಲ್ಲಿ ಶುರುವಾದ ಈ ಕ್ಯುಆರ್ ಕೋಡ್ ವ್ಯವಸ್ಥೆ ಬಳಕೆದಾರರು ಕೇವಲ 2.17 ಲಕ್ಷ ಜನ ಇದ್ದರು. ಈಗ ಅದು ಕೇವಲ 4 ತಿಂಗಳಲ್ಲಿ ನಾಲ್ಕುಪಟ್ಟು ಅಂದರೆ 8.25 ಲಕ್ಷಕ್ಕೆ ಏರಿಕೆಯಾಗಿದೆ. ನವೆಂಬರ್ನಿಂದ ಏಪ್ರಿಲ್ ಅಂತ್ಯಕ್ಕೆ ಕ್ಯುಆರ್ ಕೋಡ್ ಮತ್ತು ವಾಟ್ಸ್ಆಯಪ್ ಚಾಟ್ಬಾಟ್ ಮೂಲಕ ಪ್ರಯಾಣಿಸಿದವರ ಸಂಖ್ಯೆ 31.80 ಲಕ್ಷ ಆಗಿದೆ.
ಇದರೊಂದಿಗೆ ಸರಾಸರಿ 25 ಸಾವಿರ ಜನ ಈ ಮಾದರಿಯನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ಇದು ಸುಧಾರಿತ ತಂತ್ರಜ್ಞಾನಕ್ಕೆ ಸಿಲಿಕಾನ್ ಸಿಟಿಯಲ್ಲಿ ದೊರೆಯುತ್ತಿರುವ ಸ್ಪಂದನೆಗೆ ಸಾಕ್ಷಿ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್)ದ ಅಧಿಕಾರಿಗಳು ತಿಳಿಸುತ್ತಾರೆ.
ಈ ವ್ಯವಸ್ಥೆ ಪ್ರಾರಂಭವಾದ ಮೊದಲ ತಿಂಗಳು ಅಂದರೆ ನವೆಂಬರ್ನಲ್ಲಿ 2,17,708 ಜನ ಕ್ಯುಆರ್ ಕೋಡ್ ಬಳಸುತ್ತಿದ್ದು, ಡಿಸೆಂಬರ್ನಲ್ಲಿ 4,39,502ಕ್ಕೆ ಏರಿಕೆಯಾಯಿತು. ಅದೇ ರೀತಿ ಜನವರಿಯಲ್ಲಿ 5,21,320, ಫೆಬ್ರುವರಿ 5,21,320, ಮಾರ್ಚ್ 6,63,956 ಹಾಗೂ ಏಪ್ರಿಲ್ನಲ್ಲಿ 8,25,424 ಜನ ಕ್ಯುಆರ್ ಕೋಡ್ ಸ್ಕ್ಯಾನರ್ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.