ಮೈಸೂರು: ಕೇರಳದ ವಯನಾಡು ಭಾಗದಲ್ಲಿ ಕೊಂಚ ಮಳೆ ಪ್ರಮಾಣ ಹೆಚ್ಚಾಗಿದ್ದು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 52.26 ಅಡಿ ಇದೆ.
ಪ್ರತಿ ಬಾರಿಗಿಂತ ಈ ಬಾರಿ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿತ್ತು. ಕೇವಲ 2 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಾಗಿತ್ತು, ಕಾವೇರಿ ನದಿ ಪಾತ್ರದ ನಗರ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.
ಮುಂಗಾರು ವಿಳಂಬವಾಗಬಹುದೆಂಬ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ನೀರಿನ ಸಂಗ್ರಹ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಒಳಹರಿವು ಹೆಚ್ಚಿದೆ, ಹೀಗಾಗಿ ಕಬಿನಿ ಜಲಾಶಯ ನೀರಿನ ಮಟ್ಟ ಏರಿಕೆಯಾಗಿದೆ.