ಬೆಂಗಳೂರು:- ಶಾಲೆಗಳಲ್ಲಿ ಅತಿಯಾದ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳಲ್ಲಿ ಒತ್ತಡ ಹೆಚ್ಚುತ್ತಿದ್ದು, ಖಾಸಗಿ ಶಾಲೆಗಳು ಕಳವಳ ಹೊರ ಹಾಕಿದೆ.
5, 8, 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಸರಣಿ ಪೂರ್ವ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳಲ್ಲಿ ಒತ್ತಡ ವಿಪರೀತ ಹೆಚ್ಚಾಗುತ್ತಿದೆ ಎಂದು ಆಡಳಿತ ಮಂಡಳಿಗಳು ಹೇಳಿವೆ. ಈ ವಿಚಾರವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರವನ್ನೂ ಬರೆದಿವೆ. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಉಂಟುಮಾಡುತ್ತಿವೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘ ಉಲ್ಲೇಖಿಸಿದೆ.
ಅಂತಿಮ ಪರೀಕ್ಷೆಗಳ ಹೊರತಾಗಿ, ಮಕ್ಕಳು ಸದ್ಯ ಕನಿಷ್ಠ 3 ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಇದು ಅವರ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳಲ್ಲಿ ಮೌಖಿಕ ಕಲಿಕೆಯ ಬಗ್ಗೆ ಸಂಘವು ಕಳವಳ ವ್ಯಕ್ತಪಡಿಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.
ಸರಣಿ ಪರೀಕ್ಷೆಗಳ ಕಾರಣ ಮಕ್ಕಳು ಕೇವಲ ಪರೀಕ್ಷೆಗಾಗಿ ಓದುತ್ತಿದ್ದಾರಷ್ಟೆ. ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಗುಣಮಟ್ಟದ ಶಿಕ್ಷಣದ ನಿಜವಾದ ಉದ್ದೇಶವನ್ನು ಪೂರೈಸುತ್ತಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು ನಡೆಸುವ ಪೂರ್ವಸಿದ್ಧತಾ ಪರೀಕ್ಷೆಯ ಹೊರತಾಗಿ, ಹೆಚ್ಚುವರಿ ಪರೀಕ್ಷೆಗಳನ್ನು ಬ್ಲಾಕ್ ಶಿಕ್ಷಣ ಅಧಿಕಾರಿಗಳು, ಉಪ ನಿರ್ದೇಶಕರು ಮತ್ತು ಶಾಲೆಗಳ ಮಟ್ಟದಲ್ಲಿ ನಡೆಸಲಾಗುತ್ತಿದೆ. ಸರಣಿ ಪರೀಕ್ಷೆಗಳು, ವಿಷಯಗಳ ಪಾಠವನ್ನು ಬೇಗನೆ ಮುಗಿಸಬೇಕಾದ ಒತ್ತಡವನ್ನು ಶಿಕ್ಷಕರ ಮೇಲೂ ತಂದೊಡ್ಡುತ್ತಿವೆ. ಕೇವಲ ಪರೀಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲವೂ ನಡೆಯುವಂತಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಸಂಘವು ಇದನ್ನು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದೆ.
ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಮಕ್ಕಳನ್ನು ರಾಜ್ಯ ಮಂಡಳಿಯ ಶಿಕ್ಷಣ ವ್ಯವಸ್ಥೆಯಿಂದ ಇತರ ಮಂಡಳಿಗಳಿಗೆ ಸೇರುವಂತೆ ಮಾಡಲು ಕಾರಣವಾಗುತ್ತಿದೆ. ಎಸ್ಎಸ್ಎಲ್ಸಿ ಮತ್ತು ಸೆಕೆಂಡ್ ಪಿಯುಸಿಗಾಗಿ ಮೂರು ಪರೀಕ್ಷಾ ನೀತಿಯನ್ನು ಮರುಪರಿಶೀಲಿಸುವಂತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಎರಡು ಪರೀಕ್ಷಾ ವ್ಯವಸ್ಥೆಗೆ ಹಿಂತಿರುಗುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸಂಘವು ಹೇಳಿದೆ ಎನ್ನಲಾಗಿದೆ.