ಹೊಸದಿಲ್ಲಿ: ಇಡೀ ಜಗತ್ತು ಕಾಯುತ್ತಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಸಮಯ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಇಡೀ ಕ್ರಿಕೆಟ್ ಜಗತ್ತು ಈ ಹೈವೋಲ್ಟೇಜ್ ಪಂದ್ಯವನ್ನು ಆನಂದಿಸಲಿದೆ. ಆಗಸ್ಟ್ 30 ರಂದು 2023ರ ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 2 ರಂದು ಇಂಡೋ-ಪಾಕ್ ಪರಸ್ಪರ ಮುಖಾಮುಖಿಯಾಗಲಿವೆ.
ಆಸ್ಟ್ರೇಲಿಯಾ ಆತಿಥ್ಯದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೆಲ್ಬೋರ್ನ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಭಾರತ ತಂಡ ಕೊನೆಯ ಬಾರಿ ಮುಖಾಮುಖಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸುತ್ತಿವೆ.
ಭಾರತ ತಂಡದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಭಾರತ-ಪಾಕ್ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಸ್ಲೆಡ್ಜಿಂಗ್ ತನ್ನ ಮಿತಿ ಮೀರುತ್ತಿದೆ ಮತ್ತು ಆ ಮಾತುಗಳನ್ನು ಟಿವಿಯಲ್ಲಿ ಹೇಳಲಾಗುವುದಿಲ್ಲ. ‘ಭಾರತ-ಪಾಕಿಸ್ತಾನ ಕದನ ಯಾವಾಗಲೂ ಕುತೂಹಲಕರವಾಗಿರುತ್ತದೆ. ಈ ಪಂದ್ಯವನ್ನು ಉಭಯ ದೇಶಗಳ ನಡುವಿನ ಯುದ್ಧ ಎಂದೇ ಪರಿಗಣಿಸಲಾಗಿದೆ ಎಂದಿದ್ದಾರೆ.