ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ ಬದಲು ಇನಿಂಗ್ಸ್ ಆರಂಭಿಸಲು ಶುಭಮನ್ ಗಿಲ್ಗೆ ಅವಕಾಶ ನೀಡಬೇಕೆಂದು ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಇತ್ತೀಚೆಗೆ ಸೀಮಿತ ಓವರ್ಗಳ ಸ್ವರೂಪದಲ್ಲಿ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಒಂದು ದ್ವಿಶತಕ ಸೇರಿದಂತೆ ಹಲವು ಶತಕಗಳನ್ನು ಅವರು ಸಿಡಿಸಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ದ ಆರಂಭಿಕ ಎರಡು ಪಂದ್ಯಗಳಿಗೆ ಕೆ.ಎಲ್ ರಾಹುಲ್ಗೆ ಅವಕಾಶ ನೀಡಲಾಗಿತ್ತು. ಆದರೆ, ಎರಡೂ ಪಂದ್ಯಗಳಲ್ಲಿ ರಾಹುಲ್ ಗಳಿಸಿದ್ದು ಕೇವಲ 38 ರನ್ ಮಾತ್ರ.
ಈ ಹಿನ್ನೆಲೆಯಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಬದಲು ಶುಭಮನ್ ಗಿಲ್ಗೆ ಅವಕಾಶ ನೀಡಬೇಕೆಂದು ಹಲವು ಮಾಜಿ ಆಟಗಾರರು ಆಗ್ರಹಿಸಿದ್ದಾರೆ. ಅದರಂತೆ ಇದೀಗ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಇದೇ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ಐಸಿಸಿ ರಿವ್ಯೂವ್ ಇತ್ತೀಚೆಗೆ ಆವೃತ್ತಿಯಲ್ಲಿ ಮಾತನಾಡಿದ್ದ ರವಿ ಶಾಸ್ತ್ರಿ, “ಪ್ರಸ್ತುತ ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ರನ್ ಹೊಡೆಯಲಿ ಅಥವಾ ಬಿಡಲಿ, ಅವರು ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲು ಅರ್ಹರಾಗಿದ್ದಾರೆ,” ಎಂದು ಆಗ್ರಹಿಸಿದ್ದಾರೆ.
“ನಿಮ್ಮ ಬಳಿ ಒಬ್ಬ ಆಟಗಾರ ಅತ್ಯುತ್ತಮ ಫಾರ್ಮ್ನೊಂದಿಗೆ ವಿಶ್ವಾಸದಲ್ಲಿ ಇದ್ದಾಗ, ಅವರಿಗೆ ನೀವು ತಂಡದಲ್ಲಿ ಅವಕಾಶ ಮಾಡಿಕೊಡಬೇಕು. ಏಕೆಂದರೆ ಈ ಸಮಯ ಅವರಿಗೆ ಅತ್ಯಂತ ಮುಖ್ಯವಾಗಿರುತ್ತದೆ. ಅಂದಹಾಗೆ ಈ ಆಟಗಾರ ಉತ್ತಮ ಲಯದಲ್ಲಿದ್ದರೂ ಯಾಕೆ ಆಡುತ್ತಿಲ್ಲ ಎಂಬ ಭಾವನೆ ತಂಡದಲ್ಲಿರುವ ಇತರೆ ಬ್ಯಾಟ್ಸ್ಮನ್ಗಳಿಗೂ ಕೂಡ ಹುಟ್ಟುತ್ತದೆ,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.