ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 117 ರನ್ಗಳಿಗೆ ಆಲೌಟ್ ಆಗಿದೆ. ಆಸೀಸ್ ವೇಗಿಗಳ ದಾಳಿಗೆ ನಲುಗಿದ ಟೀಂ ಇಂಡಿಯಾಕ್ಕೆ 26 ಓವರ್ ಕೂಡ ಆಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರೋಹಿತ್ ಪಡೆಗೆ ಒಂದೇ ಒಂದು ಉತ್ತಮ ಜೊತೆಯಾಟ ನಡೆಸಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಹೊರತುಪಡಿಸಿ, ಯಾವುದೇ ಬ್ಯಾಟ್ಸ್ಮನ್ಗೂ 30 ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಕ್ಷರ್ ಪಟೇಲ್ ಹೋರಾಟ ನಡೆಸಿದರಾದರೂ, ಅವರಿಗೆ ಯಾರಿಂದಲೂ ಸಾಥ್ ಸಿಗಲಿಲ್ಲ.
ಕೇವಲ 117 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ತವರಿನಲ್ಲಿ ಟೀಂ ಇಂಡಿಯಾ ಗಳಿಸಿದ ನಾಲ್ಕನೇ ಅತಿ ಕಡಿಮೆ ಸ್ಕೋರ್ ಇದಾಗಿದೆ. ಅದೇ ಸಮಯದಲ್ಲಿ, ಇದು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಮೂರನೇ ಅತಿ ಕಡಿಮೆ ಸ್ಕೋರ್ ಕೂಡ ಆಗಿದೆ. ಮುಂಬೈನಲ್ಲೂ ಇದೇ ರೀತಿಯ ಪ್ರದರ್ಶನ ನೀಡಿದ್ದ ಭಾರತ ಸೋಲಿನ ಸುಳಿಗೆ ಸಿಲುಕ್ಕಿತ್ತು. ಆದರೆ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ನಡುವಿನ ಶತಕದ ಜೊತೆಯಾಟ ತಂಡವನ್ನು ಗೆಲುವಿನ ದಡ ಸೇರಿಸಿತ್ತು. ಆದರೆ ವಿಶಾಖಪಟ್ಟಣದಲ್ಲಿ ಅಂತಹ ಯಾವುದೇ ಪಾಲುದಾರಿಕೆ ಕಂಡುಬರಲಿಲ್ಲ