ಎರಡು ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ. ಇಂದು ನಡೆಯಲಿರುವ ದ್ವಿಪಕ್ಷೀಯ ಮಾತುಕತೆಗೆಊ ಮುನ್ನ ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರನ್ನು ಖಾಸಗಿಯಾಗಿ ಭೇಟಿಯಾದ ಮೋದಿ, ಭಾರತ-ಆಸ್ಟ್ರಿಯಾ ಸ್ನೇಹವು ಬಲವಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.
ರಷ್ಯಾ ಪ್ರವಾಸ ಮುಗಿಯುತ್ತಿದ್ದಂತೆ ಮೋದಿ ಆಸ್ಟ್ರಿಯಾಗೆ ಆಗಮಿಸಿದ್ದಾರೆ. ಎರಡು ದಿನಗಳ ಭೇಟಿಗಾಗಿ ನಿನ್ನೆ ಸಂಜೆ ಮಾಸ್ಕೋದಿಂದ ವಿಯೆನ್ನಾಕ್ಕೆ ಮೋದಿ ಆಗಮಿಸಿದ್ದು, 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡುತ್ತಿರುವುದ ವಿಶೇಷವಾಗಿದೆ. ಮೋದಿ ಅವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಒಂದು ಫೋಟೋದಲ್ಲಿ ಪ್ರಧಾನಿ ಮೋದಿಯವರು ಆಸ್ಟ್ರಿಯಾ ಚಾನ್ಸೆಲರ್ ನೆಹಮ್ಮರ್ ಅವರನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದರೆ, ಇನ್ನೊಂದರಲ್ಲಿ ಆಸ್ಟ್ರಿಯಾದ ಚಾನ್ಸೆಲರ್ ಅವರು ಪ್ರಧಾನಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಮೈಕ್ರೋಬ್ಲಾಗಿಂಗ್ ವೇದಿಕೆಗಳಲ್ಲಿ ನೆಹಮ್ಮರ್ ತಮ್ಮ ಮತ್ತು ಮೋದಿಯವರ ಫೋಟೋವನ್ನು ಪೋಸ್ಟ್ ಮಾಡಿ, ವಿಯೆನ್ನಾಕ್ಕೆ ಸುಸ್ವಾಗತ, ಪ್ರಧಾನಿ ಮೋದಿಯವರೇ, ನಿಮ್ಮನ್ನು ಆಸ್ಟ್ರಿಯಾಕ್ಕೆ ಸ್ವಾಗತಿಸಲು ಸಂತೋಷ ಮತ್ತು ಗೌರವವಾಗಿದೆ. ಆಸ್ಟ್ರಿಯಾ ಮತ್ತು ಭಾರತವು ಸ್ನೇಹಿತರು ಮತ್ತು ಪಾಲುದಾರರು. ನಿಮ್ಮ ಭೇಟಿ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಚರ್ಚೆಗೆ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.