ಚೀನಾದೊಂದಿಗಿನ ಭಾರತದ ಗಡಿವಿವಾದದಲ್ಲಿ ಮೂರನೇ ಪಕ್ಷದ ಪಾತ್ರವನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಳ್ಳಿಹಾಕಿದ್ದಾರೆ. ಈ ಸಮಸ್ಯೆ 2 ನೆರೆಯ ರಾಷ್ಟ್ರಗಳ ನಡುವಿನದ್ದಾಗಿದ್ದು, ಅದನ್ನು ಪರಿಹರಿಸಿಕೊಳ್ಳುವುದು ಭಾರತ ಮತ್ತು ಚೀನಾಕ್ಕೆ ಬಿಟ್ಟದ್ದು ಎಂದಿದ್ದಾರೆ.
ಟೋಕಿಯೋದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜೈಶಂಕರ್, ‘ಭಾರತ ಮತ್ತು ಚೀನಾ ನಡುವಿನ ನಿಜವಾದ ಸಮಸ್ಯೆ ಏನೆಂಬುದನ್ನು ಗುರುತಿಸಲು ಮತ್ತು ಅದನ್ನು ಬಗೆಹರಿಸಿಕೊಳ್ಳಲು ನಾವು ಇತರ ದೇಶಗಳ ಮಧ್ಯಸ್ಥಿಕೆಯನ್ನು ಬಯಸುತ್ತಿಲ್ಲ’ ಎಂದು ಹೇಳಿದ್ದಾರೆ.
ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಟೋಕಿಯೋಗೆ ತೆರಳಿರುವ ಜೈಶಂಕರ್, ಚೀನಾದೊಂದಿಗಿನ ಭಾರತದ ಸಂಬಂಧ ಚೆನ್ನಾಗಿಲ್ಲ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು. ನಿಸ್ಸಂಶಯವಾಗಿ ಪ್ರಪಂಚದ ಇತರ ದೇಶಗಳು ಈ ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುತ್ತವೆ. ಏಕೆಂದರೆ ನಮ್ಮ ಎರಡು ದೊಡ್ಡ ದೇಶಗಳು ಮತ್ತು ನಮ್ಮ ಸಂಬಂಧದ ಸ್ಥಿತಿಯು ಪ್ರಪಂಚದ ಉಳಿದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.