ವಾಷಿಂಗ್ಟನ್: ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟ ಸ್ಥಾಪಿಸುವ ವಿಚಾರದಲ್ಲಿ ಭಾರತದ ನಾಯಕತ್ವ ಮತ್ತು ಪ್ರಯತ್ನಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸರ್ಕಾರದ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದು, ಭಾರತವು ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಕಂಡಿದೆ ಮತ್ತು ಅಭಿವೃದ್ಧಿಯನ್ನೂ ಸಾಧಿಸಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಆಡಳಿತಾಧಿಕಾರಿ ಸಮಂತಾ ಪವಾರ್ ‘ಜಗತ್ತಿನಾದ್ಯಂತ ವಿಪತ್ತು ತಡೆಗೆ ಭಾರತ ಸ್ಥಿರವಾದ ಬದ್ಧತೆ ತೋರಿದೆ. ದೇಶದ ನಾಯಕತ್ವವು ಸಿಡಿಆರ್ಐ ಸ್ಥಾಪನೆಗೆ ನೆರವು ನೀಡಿದ್ದು, ಸರ್ಕಾರ ಮಾತ್ರವಲ್ಲದೆ ಜನರೂ ಇದರ ಅನುಷ್ಠಾನದಲ್ಲಿ ಭಾಗಿಯಾದಾಗ ಮಾತ್ರ ಇದು ಯಶಸ್ವಿಯಾಗಲಿದೆ’ ಎಂದರು.
‘ಜಗತ್ತಿನಾದ್ಯಂತ ಹವಾಮಾನ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಪ್ರದೇಶಗಳು ಮುಳುಗಡೆಯಾಗಿದೆ. ಪೂರ್ವ ಆಫ್ರಿಕಾದ ಹಲವು ಭಾಗಗಳು ತೀವ್ರ ಬರದಿಂದ ತತ್ತರಿಸಿವೆ. ಅಮೆರಿಕಾದ ಪಶ್ಚಿಮ ಭಾಗ ಮತ್ತು ಭಾರತವು ವಿನಾಶಕಾರಿ ಬಿಸಿ ಗಾಳಿ ಎದುರಿಸುತ್ತಿವೆ. ಇಂತಹ ವಿಪತ್ತುಗಳ ವಿರುದ್ಧ ಯಾವುದೇ ಸರ್ಕಾರ ಅಥವಾ ದೇಶ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ವಿಪತ್ತು ತಡೆಯುವಲ್ಲಿ ಭಾಗಿಯಾಗುವ ಅಭಿಯಾನ ಆರಂಭಿಸಬೇಕಿದೆ’ ಎಂದು ಸಮಂತಾ ಪವಾರ್ ಕರೆ ನೀಡಿದ್ದಾರೆ.