ಇಸ್ಲಾಮಾಬಾದ್: ಭಾರತವು ಚಂದ್ರನನ್ನು (Chandrayaan-3) ತಲುಪಿ ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರವಾದರೆ, ಇತ್ತ ಪಾಕಿಸ್ತಾನವು ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋ ಲಿಂಕ್ ಮೂಲಕ ಲಾಹೋರ್ ನ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಭಾರತವು (India) ಚಂದ್ರನನ್ನು ತಲುಪಿ ಜಿ20 ಶೃಂಗಸಭೆಯನ್ನು (G-20 Summit) ಬಹಳ ಯಶಸ್ವಿಯಾಗಿ ನಡೆಸಿದೆ.
ಆದರೆ ಇಂದು ಪಾಕಿಸ್ತಾನದ (Pakistan) ಪ್ರಧಾನಿ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಯನ್ನು ಪಾಕಿಸ್ತಾನಕ್ಕೆ ಸಾಧಿಸಲು ಏಕೆ ಸಾಧ್ಯವಾಗಲಿಲ್ಲ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. 1990 ರಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಭಾರತ ಅನುಸರಿಸಿದೆ. ಅಟಲ್ ಬಿಹಾರಿ ವಾಜಪೇಯಿ (Atal Bihari Vijapayee) ಅವರು ಭಾರತದ ಪ್ರಧಾನಿಯಾದಾಗ ಭಾರತದ ವಿದೇಶಿ ವಿನಿಮಯ ಕೇವಲ ಒಂದು ಶತಕೋಟಿ ಡಾಲರ್ಗಳಷ್ಟಿತ್ತು.
ಆದರೆ ಈಗ ಅದು 600 ಶತಕೋಟಿ ಡಾಲರ್ಗೆ ಏರಿದೆ. ಭಾರತ ಇಂದು ಎಲ್ಲಿಗೆ ತಲುಪಿದೆ?, ಪಾಕಿಸ್ತಾನ ಭಿಕ್ಷಾಟನೆಯಿಂದ ಎಲ್ಲಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಅವರು ಪಾಕಿಸ್ತಾನದ ಈ ಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ದೂರಿದ್ದಾರೆ.