ಜೋಹಾನ್ಸ್ಬರ್ಗ್ : ಪ್ರಧಾನಿ ನರೇಂದ್ರ ಮೋದಿ (Narendra Modi) ಬ್ರಿಕ್ಸ್ (BRICS) ವಿಸ್ತರಣೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದು, ಒಮ್ಮತದ ಆಧಾರದ ಮೇಲೆ ಮುಂದುವರಿಯುವ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ (Johannesburg) ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯ ಮುಕ್ತ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ತನ್ನ ಜಿ 20 ಅಧ್ಯಕ್ಷತೆಯಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಬ್ರಿಕ್ಸ್ ಶೃಂಗಸಭೆಗೆ ಆತಿಥ್ಯ ವಹಿಸಿದ ದಕ್ಷಿಣ ಆಫ್ರಿಕಾವನ್ನು ಅವರು ಶ್ಲಾಘಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ನಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಭಾರತವು ತನ್ನ ಜಿ 20 ಅಧ್ಯಕ್ಷತೆಯಲ್ಲಿ ಈ ವಿಷಯಕ್ಕೆ ಪ್ರಾಮುಖ್ಯತೆ ನೀಡಿದೆ ಎಂದು ಮೋದಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಬ್ರಿಕ್ಸ್ ಸುದೀರ್ಘ ಮತ್ತು ಅದ್ಭುತವಾದ ಪ್ರಯಾಣವನ್ನು ಆರಂಭಿಸಿದೆ. ಗ್ಲೋಬಲ್ ಸೌತ್ನಲ್ಲಿ ಅಭಿವೃದ್ಧಿಶೀಲ ಚಟುವಟಿಕೆಗಳನ್ನು ಮುಂದಕ್ಕೆ ಸಾಗಿಸುವಲ್ಲಿ ಗುಂಪಿನ ಹೊಸ ಅಭಿವೃದ್ಧಿ ಬ್ಯಾಂಕ್ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ರೈಲ್ವೆ ಸಂಶೋಧನಾ ಜಾಲಗಳ ಕ್ಷೇತ್ರಗಳಲ್ಲಿ ಕ್ರಮಗಳನ್ನು ಮತ್ತು ಎಂಎಸ್ಎಂಇಗಳು ಮತ್ತು ಸ್ಟಾರ್ಟ್ಅಪ್ಗಳ ನಡುವಿನ ಸಹಕಾರವನ್ನು ಭಾರತ ಸೂಚಿಸಿದ್ದು, ಈ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.ತಂತ್ರಜ್ಞಾನದ ಬಳಕೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ ಪ್ರಧಾನಿ ಮೋದಿ, ಬ್ರಿಕ್ಸ್ ದೇಶಗಳು ತಮ್ಮ ಸಮಾಜಗಳನ್ನು ಭವಿಷ್ಯಕ್ಕೆ ಸಿದ್ಧವಾಗುವಂತೆ ಮಾಡಬೇಕಾಗಿದೆ. ಈ ಪ್ರಯತ್ನಗಳಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ. ಭಾರತದೊಂದಿಗೆ ಜೋಹಾನ್ಸ್ಬರ್ಗ್ನ ಗಾಢ ಮತ್ತು ಹಳೆಯ ಸಂಬಂಧಗಳು ಮತ್ತು ದಕ್ಷಿಣ ಆಫ್ರಿಕಾದೊಂದಿಗಿನ ಮಹಾತ್ಮ ಗಾಂಧಿಯವರ ಸಂಪರ್ಕ ಮತ್ತು ಉಭಯ ದೇಶಗಳ ನಡುವಿನ ಐತಿಹಾಸಿಕ ಸಂಪರ್ಕಗಳನ್ನು ಪ್ರಧಾನಿ ನೆನಪಿಸಿಕೊಂಡರು.