ಕೆನಡಾ: ಅಕ್ಟೋಬರ್ 10ರ ವೇಳೆಗೆ ಸುಮಾರು 40 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಭಾರತ ಸೂಚನೆ ನೀಡಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಹೊಸದಿಲ್ಲಿ ಈ ನಡೆ ಅನುಸರಿಸಿದೆ.
ಅಕ್ಟೋಬರ್ 10ರ ಬಳಿಕ ದೇಶದಲ್ಲಿ ಯಾವುದೇ ಕೆನಡಾ ರಾಜತಾಂತ್ರಿಕ ಉಳಿದುಕೊಂಡರೆ ಅವರ ರಾಜತಾಂತ್ರಿಕ ಸವಲತ್ತನ್ನು ಕಡಿತಗೊಳಿಸಲಾಗುವುದು ಎಂದು ಭಾರತ ಎಚ್ಚರಿಕೆ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ದಿ ಫೈನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ. ಭಾರತದಲ್ಲಿ ಕೆನಡಾದ 62 ರಾಜತಾಂತ್ರಿಕರಿದ್ದಾರೆ. ಹೈ ಕಮಿಷನ್ನಲ್ಲಿರುವ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಅವರ ಸಂಖ್ಯೆ ಕಡಿತಗೊಳಿಸಬೇಕು ಎಂದು ಭಾರತ ಹೇಳಿದೆ.
ಪ್ರಧಾನಿ ಜಸ್ಟಿನ್ ಟ್ರುಡೊ ಹಿಂದೆ ಸರಿಯುವುದಿಲ್ಲ. ಕೆನಡಾವನ್ನು ಭಾರತ ಸುಲಭದ ಗುರಿಯಂತೆ ಕಂಡಿತ್ತು. ಟ್ರುಡೊ ಅವರದು ಅಲ್ಪಮತದ ಸರ್ಕಾರವಾಗಿರುವ ಕಾರಣ ಒಟ್ಟಾವದ ಪ್ರತೀಕಾರದ ಸೀಮಿತ ಸಾಮರ್ಥ್ಯ ಭಾರತಕ್ಕೆ ಅರಿವಿತ್ತು ಎಂದು ಬೋಹಮ್ ಹೇಳಿದ್ದಾರೆ. “ಪ್ರತೀಕಾರ ಕೈಗೊಳ್ಳುವ ನಮ್ಮ ಸಾಮರ್ಥ್ಯ ಸೀಮಿತವಾಗಿದೆ, ನಮ್ಮ ಬಳಿ ಇರುವುದು ಅಲ್ಪಸಂಖ್ಯಾತ ಸರ್ಕಾರ ಹಾಗೂ ಆನಂತರದ ರಾಜಕೀಯ ಏನಾಗಲಿದೆ ಎನ್ನುವುದು ಭಾರತಕ್ಕೆ ತಿಳಿದಿದೆ. ಮುಖ್ಯವಾಗಿ, ಭಾರತವು ಮುಂದೆ ಚುನಾವಣೆ ಎದುರಿಸಲಿದೆ” ಎಂದು ಬೋಹಮ್ ಹೇಳಿದ್ದಾಗಿ ಪತ್ರಿಕೆ ವರದಿ ತಿಳಿಸಿದೆ.