ಸೋಚಿ: ಭಾರತ ಸರ್ಕಾರವು ತನ್ನ ನಾಗರಿಕರ ಹಿತಾಸಕ್ತಿಗಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ರಷ್ಯಾ ಮತ್ತು ಭಾರತದ ಮಧ್ಯೆ ಕಿತ್ತಾಟ ಸೃಷ್ಟಿಸುವ ಪಶ್ಚಿಮದ ಯಾವುದೇ ಪ್ರಯತ್ನಗಳು ಕೈಗೂಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. “ತಮ್ಮ ಏಕಸ್ವಾಮ್ಯವನ್ನು ಒಪ್ಪದ ಪ್ರತಿಯೊಬ್ಬರ ನಡುವೆ, ಸಂಕಷ್ಟದಲ್ಲಿ ಇರುವವರ ಮಧ್ಯೆ ವೈರತ್ವ ಸೃಷ್ಟಿಸಲು ಪಶ್ಚಿಮ ದೇಶಗಳು ಪ್ರಯತ್ನಿಸುತ್ತಿವೆ. ಭಾರತದ ವಿಚಾರದಲ್ಲಿಯೂ ಕೂಡ ಈ ಪ್ರಯತ್ನ ನಡೆಯುತ್ತಿದೆ.
ಆದರೆ ಭಾರತದ ನಾಯಕತ್ವವು ತನ್ನ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಸ್ವತಂತ್ರವಾಗಿ ಕ್ರಮ ಕೈಗೊಳ್ಳುತ್ತಿದೆ” ಎಂದು ಸೋಚಿಯ ರಷ್ಯನ್ ಬ್ಲ್ಯಾಕ್ ಸೀ ರೆಸಾರ್ಟ್ನಲ್ಲಿ ಮಾಡದ ಭಾಷಣದಲ್ಲಿ ಪುಟಿನ್ ಹೇಳಿದರು. “ರಷ್ಯಾದಿಂದ ಭಾರತವನ್ನು ದೂರ ಸರಿಸುವ ಪ್ರಯತ್ನಗಳು ನಿಷ್ಪ್ರಯೋಜಕ. ಭಾರತ ಒಂದು ಸ್ವತಂತ್ರ ದೇಶ” ಎಂದು ಪುಟಿನ್, ಉಕ್ರೇನ್ ವಿರುದ್ಧದ ರಷ್ಯಾ ಯುದ್ಧದ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಅಮೆರಿಕ ಹಾಗೂ ಇತರೆ ದೇಶಗಳು ಭಾರತದ ಮೇಲೆ ಒತ್ತಡ ಹೇರಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಉಕ್ರೇನ್ ಜತೆ ರಷ್ಯಾ ಯುದ್ಧ ಆರಂಭಿಸಿದ ನಂತರ ಪಶ್ಚಿಮ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದವು. ಇದರ ಬೆನ್ನಲ್ಲೇ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳಲು ಆರಂಭಿಸಿತ್ತು. ಇದನ್ನು ವಿವಿಧ ದೇಶಗಳು ಟೀಕಿಸಿದ್ದವು. ರಷ್ಯಾ ಜತೆಗಿನ ವ್ಯವಹಾರ ನಿಲ್ಲಿಸುವಂತೆ ಒತ್ತಡ ಹೇರಲು ಪ್ರಯತ್ನಿಸಿದ್ದವು. ಆದರೆ ಇವುಗಳಿಗೆ ಭಾರತ ಕಿವಿಗೊಟ್ಟಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಪುಟಿನ್, ಭಾರತವು ಮೋದಿ ನಾಯಕತ್ವದಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆಯುತ್ತಿದೆ ಎಂದು ಹೇಳಿದರು.