ಅಮೆರಿಕ: ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಸಾವಿರಾರು ಹಮಾಸ್ ಉಗ್ರರು ಏಕಕಾಲಕ್ಕೆ ನೆಲ, ಜಲ, ವಾಯು ಮಾರ್ಗವಾಗಿ ಇಸ್ರೇಲ್ ನೆಲಕ್ಕೆ ಲಗ್ಗೆ ಇಟ್ಟು 1,400 ಇಸ್ರೇಲ್ ಪ್ರಜೆಗಳನ್ನು ಕೊಂದು ಹಾಕಿದ್ದಷ್ಟೇ ಅಲ್ಲದೆ, 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಮಾಡಿಕೊಂಡು ಗಾಜಾಪಟ್ಟಿಗೆ ಕರೆದೊಯ್ದರು. ಇದಾದ ಬಳಿಕ ಗಾಜಾಪಟ್ಟಿ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್ ವಾಯು ಪಡೆ ಇದೀಗ ಭೂ ಸೇನೆಯನ್ನೂ ಗಾಜಾಪಟ್ಟಿಗೆ ನುಗ್ಗಿಸಿದೆ. ಹಮಾಸ್ ಉಗ್ರರ ಈ ದಿಢೀರ್ ದಾಳಿಗೆ ಕಾರಣವೇನು ಅನ್ನೋ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಎದುರಾಗಿದೆ. ಇದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಉತ್ತರ ಕೊಟ್ಟಿದ್ದಾರೆ!
ಕಳೆದ ಸೆಪ್ಟೆಂಬರ್ನಲ್ಲಿ ಭಾರತ ರಾಜಧಾನಿ ಹೊಸ ದಿಲ್ಲಿಯಲ್ಲಿ ನಡೆದ ಜಿ – 20 ಶೃಂಗ ಸಭೆಯಲ್ಲಿ ಒಂದು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಆರ್ಥಿಕತೆ ಹೊಂದಿರುವ 20 ರಾಷ್ಟ್ರಗಳ ಸಮೂಹವು ಭಾರತ – ಮಧ್ಯ ಪ್ರಾಚ್ಯ ಹಾಗೂ ಯುರೋಪ್ ಖಂಡಗಳ ನಡುವಣ ಆರ್ಥಿಕ ಕಾರಿಡಾರ್ ಸಂಪರ್ಕ ಕಲ್ಪಿಸುವ ಯೋಜನೆಯನ್ನ ಪ್ರಕಟಿಸಲಾಗಿತ್ತು. ರಸ್ತೆ, ರೈಲು ಹಾಗೂ ಬಂದರುಗಳ ಮೂಲಕ ಭಾರತದಿಂದ ಮಧ್ಯ ಪ್ರಾಚ್ಯ ಮಾರ್ಗವಾಗಿ ಯುರೋಪ್ ಖಂಡಗಳ ದೇಶವನ್ನು ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆ ಇದು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜಿ – 20 ಶೃಂಗ ಸಭೆಯ ಆತಿಥ್ಯ ವಹಿಸಿದ್ದ ಭಾರತ ಕೈಗೊಂಡಿದ್ದ ಈ ನಿರ್ಣಯಕ್ಕೆ ಎಲ್ಲ ರಾಷ್ಟ್ರಗಳೂ ಸಮ್ಮತಿ ಸೂಚಿಸಿದ್ದವು. ಇದೀಗ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸೋದಕ್ಕೆ ಈ ಯೋಜನೆ ಕೂಡಾ ಒಂದು ಕಾರಣ ಇರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶಂಕಿಸಿದ್ದಾರೆ.