ಅಕ್ಟೋಬರ್ 14 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ಆಡುತ್ತಿದ್ದು, ಈ ಪಂದ್ಯದ ಬಗ್ಗೆ ಹಿಟ್ ಮ್ಯಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಿಜಕ್ಕೂ ಈ ಪಂದ್ಯ(ಪಾಕಿಸ್ತಾನ) ನಮಗೆ ಅತ್ಯಂತ ಮುಖ್ಯವಾಗಿದೆ. ನಾವು ಹೆಚ್ಚುವರಿ ಸಂಗತಿಗಳ ಬಗ್ಗೆ ಹೆಚ್ಚಾಗಿ ಚಿಂತಿಸದೆ, ಪಂದ್ಯದಲ್ಲಿ ಹೇಗೆ ಹಿಡಿತ ಸಾಧಿಸಬಹುದು ಎಂಬುದರ ಬಗ್ಗೆ ಮಾತ್ರ ಗಮನ ಹರಿಸುತ್ತೇವೆ. ನಾವು ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಬೇಕಷ್ಟೇ,” ಎಂದು ಹಿಟ್ ಮ್ಯಾನ್ ಹೇಳಿದ್ದಾರೆ.
“ಪಿಚ್ ಹೇಗೆ ವರ್ತಿಸುತ್ತದೆ, ಯಾವ ಆಟಗಾರರನ್ನು ಪಂದ್ಯದಲ್ಲಿ ಆಡಿಸುತ್ತೀರಿ, ಪಂದ್ಯದಲ್ಲಿ ಹೇಗೆ ನಿಯಂತ್ರಣ ಸಾಧಿಸುತ್ತೀರಿ ಎಂಬುದು ಮುಖ್ಯ ಆಗುತ್ತದೆಯೇ ಹೊರತು, ಮೈದಾನದ ಹೊರಗಡೆ ಏನು ನಡೆಯುತ್ತಿದೆ ಎಂಬುದರ ಕುರಿತು ನಾವು ಚಿಂತಿಸುವುದೇ ಇಲ್ಲ. ಪಂದ್ಯದಲ್ಲಿ ನಾವು ಆಟಗಾರರಾಗಿ ಯಾವ ರೀತಿ ಪ್ರದರ್ಶನ ತೋರಿ ತಂಡದ ಗೆಲುವಿಗೆ ಸಹಕರಿಸಬಹುದು ಎಂಬುದರ ಬಗ್ಗೆ ಮಾತ್ರ ಯೋಚಿಸುತ್ತೇವೆ,” ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಒತ್ತಡ ನಿಭಾಯಿಸುವುದು ತುಂಬಾ ಮುಖ್ಯ ಆಗಿರುತ್ತದೆ. ಆಸ್ಟ್ರೇಲಿಯಾ ವಿರುದ್ಧ 3 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೆವು. ಆದರೆ ಉತ್ತಮ ಪ್ರದರ್ಶನ ತೋರಿ 6 ವಿಕೆಟ್ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
“ತಂಡದಲ್ಲಿ ಭಯಮುಕ್ತವಾಗಿ ಆಡುವ ಆಟಗಾರರನ್ನು ಹೊಂದಿದ್ದೇವೆ. ಕಳೆದ ಪಂದ್ಯದಲ್ಲಿ (ಆಸ್ಟ್ರೇಲಿಯಾ) ಬ್ಯಾಟರ್ ಗಳು ಆ ರೀತಿಯ ಪ್ರದರ್ಶನ ನೀಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಪಂದ್ಯದಲ್ಲಿನ ಒತ್ತಡದ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತ ಆಟವಾಡುವುದು ತುಂಬಾ ಮುಖ್ಯ ಆಗುತ್ತದೆ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.