ಭಾರತದ ವಿರುದ್ಧ ವಿಶ್ವ ಸಂಸ್ಥೆಯಲ್ಲಿ ಟರ್ಕಿ ದೇಶ ಕ್ಯಾತೆ ತೆಗೆದಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಅತ್ಯುನ್ನತ ಜಾಗತಿಕ ನಾಯಕರ 78ನೇ ಸಮ್ಮೇಳನದಲ್ಲಿ ಮಾತನಾಡಿದ ಟರ್ಕಿ ದೇಶದ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಏಷ್ಯಾದ ಪ್ರಾದೇಶಿಕ ಶಾಂತಿ, ಸುಭದ್ರತೆ ಹಾಗೂ ಸಮೃದ್ಧಿಯ ಕುರಿತಾಗಿ ಮಾತನಾಡಿದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಮಾತುಕತೆ ಹಾಗೂ ಸಹಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಇನ್ನು ಕಾಶ್ಮೀರ ವಿಚಾರದಲ್ಲಿ ಶಾಂತಿ ನೆಲೆಸಲು ಭಾರತ ಮತ್ತು ಪಾಕಿಸ್ತಾನ ನಡುವೆ ಸೌಹಾರ್ದತೆ ಮೂಡಲು ಟರ್ಕಿ ದೇಶವು ತನ್ನ ಬೆಂಬಲ ಮುಂದುವರೆಸಲಿದೆ ಎಂದೂ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಭರವಸೆ ನೀಡಿದ್ಧಾರೆ. ಕಳೆದ ವಾರವಷ್ಟೇ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರು ಹೊಸ ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರ ಜೊತೆ ಮಾತುಕತೆ ನಡೆಸಿದ್ದರು. ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ನಡೆದ ಜಿ – 20 ಶೃಂಗ ಸಭೆಯ ವೇಳೆ ಉಭಯ ನಾಯಕರು ವ್ಯಾಪಾರ, ಮೂಲ ಸೌಕರ್ಯ ವೃದ್ಧಿ ಹಾಗೂ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತಾಗಿ ಚರ್ಚೆ ನಡೆಸಿದ್ದರು.
ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸುವ ಜೊತೆಯಲ್ಲೇ ಭಾರತ ದೇಶವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸದಸ್ಯತ್ವ ಕುರಿತಾದ ಭಾರತದ ನಡೆಯನ್ನೂ ಶ್ಲಾಘಿಸಿದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಇದೊಂದು ಹೆಮ್ಮೆಯ ವಿಚಾರ ಎಂದರು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐವರು ಶಾಶ್ವತ ಸದಸ್ಯರ ಜೊತೆ 15 ತಾತ್ಕಾಲಿಕ ಸದಸ್ಯರನ್ನು ಶಾಶ್ವತ ಸದಸ್ಯರನ್ನಾಗಿ ನೇಮಿಸುವ ವಿಚಾರದಲ್ಲಿ ತಮ್ಮ ಸಹಮತ ಇದೆ ಎಂದರು.