ಪಾಕಿಸ್ತಾನ ಗಡಿ ಭಾಗದಲ್ಲಿನ ಭಯೋತ್ಪಾದನೆ ನಿಲ್ಲಿಸುವ ವರೆಗೂ ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿಗಳ ಆಯೋಜನೆ ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಘೋಷಿಸಿಯಾಗಿದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಪಾಕ್ ಪ್ರವಾಸ ಕೈಗೊಳ್ಳಲು ಮೊದಲು ಸರ್ಕಾರದ ಅನುಮತಿ ಪಡೆಯಬೇಕು.
ಈ ಅನುಮತಿ ಸಿಗದ ಕಾರಣ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಈಗಾಗಗಲೇ ಐಸಿಸಿ ಎದುರು ಸ್ಪಷ್ಟ ಪಡಿಸಿದೆ.
ಈ ಕುರಿತಾಗಿ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್, ಭಾರತ ಯಾವುದೇ ಕಾರಣಕ್ಕೂ ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರಬೇಕು ಎಂದು ಇತ್ತೀಚಿನ ಸಂದರ್ಶನದಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೆ 2017ರ ಬಳಿಕ ಇದೇ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆಯೋಜನೆ ಆಗುತ್ತಿದೆ. 2021ರಲ್ಲಿ ಟೂರ್ನಿ ನಡೆಯಬೇಕಿತ್ತು. ಆದರೆ, ಕೋವಿಡ್ 19 ಕಾರಣ ಟೂರ್ನಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 7 ವರ್ಷಗಳ ನಂತರ ಮಿನಿ ವಿಶ್ವಕಪ್ ಎಂದೇ ಕರೆಸಿಕೊಂಡಿರುವ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಐಸಿಸಿ ಮುಂದಾಗಿದೆ. 2017ರಲ್ಲಿ ನಡೆದ ಕಡೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ತಲುಪಿದ್ದವು. ಆ ಫೈನಲ್ನಲ್ಲಿ ಟೀಮ್ ಇಂಡಿಯಾ ಎದುರು ಪಾಕಿಸ್ತಾನ ಐತಿಹಾಸಿಕ ಜಯ ದಾಖಲಿಸಿತ್ತು.
“ಯಾವುದೇ ರಾಷ್ಟ್ರಗಳು ತಮ್ಮ ರಾಜಕೀಯ ಬಿಕ್ಕಟ್ಟನ್ನು ಪರಸ್ಪರ ಇತ್ಯರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಕ್ರೀಡೆಯನ್ನು ಮಧ್ಯ ತರಬಾರದು. ಕ್ರೀಡಾ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡೆತಡೆಗಳು ಎದುರಾಗಬಾರದು. ಕ್ರೀಡೆಯನ್ನು ರಾಜಕೀಯದಿಂದ ದೂರ ಇಡಬೇಕು. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. ಈಗ ಭಾರತ ತಂಡ ಪಾಕಿಸ್ತಾನಕ್ಕೆ ಬರುವ ಸಮಯ,” ಎಂದು ಶೋಯೆಬ್ ಮಲಿಕ್ ಮನವಿ ಮಾಡಿದ್ದಾರೆ.
ಭಾರತ ತಂಡದ ಈಗಿನ ಆಟಗಾರರಲ್ಲಿ ಬಹುತೇಕರು ಪಾಕಿಸ್ತಾನ ಪ್ರವಾಸ ಮಾಡೇ ಇಲ್ಲ. ಹೋಗಿ ಟೀಮ್ ಇಂಡಿಯಾ ಈಗ ಪಾಕಿಸ್ತಾನಕ್ಕೆ ಬಂದರೆ ಆ ಆಟಗಾರರಿಗೂ ಉತ್ತಮ ಅನುಭವ ಸಿಗಲಿದೆ. ಪಾಕಿಸ್ತಾನದ ಜನ ಅವರನ್ನು ಬಹಳಾ ಪ್ರೀತಿಯಿಂದ ಸ್ವಾಗತಿಸಲಿದ್ದಾರೆ. ಭಾರತ ತಂಡ ಪಾಕ್ ಪ್ರವಾಸ ಕೈಗೊಳ್ಳಲು ಬಯಸಿದ್ದೇ ಆದರೆ ಖಂಡಿತಾ ಇಲ್ಲಿ ಅಪಾರ ಪ್ರೀತಿ ಗಳಿಸಲಿದೆ. ಟೀಮ್ ಇಂಡಿಯಾ ಈ ಬಗ್ಗೆ ದಿಟ್ಟ ನಿಲುವು ತೆಗೆದುಕೊಳ್ಳುವ ಅಗತ್ಯವಿದೆ,” ಎಂದಿದ್ದಾರೆ.