ಮುಂಬೈ: 12 ವರ್ಷಗಳ ಬಳಿಕ ಭಾರತ ಹಾಗೂ ಶ್ರೀಲಂಕಾ ವಿಶ್ವಕಪ್ ಪಂದ್ಯವನ್ನಾಡಲು ವಾಂಖೇಡೆ ಕ್ರೀಡಾಂಗಣಕ್ಕೆ ಕಾಲಿಡಲಿವೆ. 2011ರ ವಿಶ್ವಕಪ್ನಲ್ಲಿ ಎರಡೂ ತಂಡಗಳು ಫೈನಲ್ನಲ್ಲಿ ಟ್ರೋಫಿಗಾಗಿ ಸೆಣಸಲಿವೆ. ಗುರುವಾರದ ಪಂದ್ಯ 2011ರ ಪಂದ್ಯದಷ್ಟು ಮಹತ್ವದ್ದಲ್ಲದಿದ್ದರೂ, ಎರಡೂ ತಂಡಗಳು ತಮ್ಮದೇ ಕಾರಣಗಳನ್ನಿಟ್ಟುಕೊಂಡು ಗೆಲ್ಲಲು ಹೋರಾಡಲಿವೆ.
ಆಡಿರುವ ಆರೂ ಪಂದ್ಯಗಳನ್ನು ಗೆದ್ದಿರುವ ಭಾರತ, ಈ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ಪ್ರವೇಶ ಅಧಿಕೃತಗೊಳ್ಳಲಿದೆ. ಇದಾದ ಮೇಲೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿರುವ ಭಾರತಕ್ಕೆ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರಾಗಲಿದೆ. ಕೊನೆವರೆಗೂ ಕಾಯದೆ ಲಂಕಾ ವಿರುದ್ಧವೇ ಗೆದ್ದು ಸೆಮೀಸ್ ಸ್ಥಾನ ಖಚಿತಪಡಿಸಿಕೊಳ್ಳುವುದು ಟೀಂ ಇಂಡಿಯಾದ ಗುರಿ.
ಮತ್ತೊಂದೆಡೆ ಲಂಕಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಲಂಕಾ ಸೆಮೀಸ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕು. ಭಾರತಕ್ಕೆ ಬಹುತೇಕ ಯಾವ ತಂಡದಿಂದಲೂ ಸಂಪೂರ್ಣವಾಗಿ ಕಠಿಣ ಸವಾಲು ಎದುರಾಗಿಲ್ಲ. ಎಲ್ಲಾ ಪಂದ್ಯಗಳಲ್ಲೂ ಕೆಲವೊಂದು ಸಂದರ್ಭಗಳಲ್ಲಷ್ಟೇ ಭಾರತ ಹಿನ್ನಡೆ ಕಂಡಿದೆ ಹೊರತು, ಹೆಚ್ಚು ಸಮಯ ತಾನೇ ಎದುರಾಳಿಯ ಮೇಲೆ ಹಿಡಿತ ಸಾಧಿಸಿದೆ. ಆದರೂ ಸೆಮಿಫೈನಲ್ಗೂ ಮುನ್ನ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಟೀಂ ಇಂಡಿಯಾಗಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ದೀಮುತ್ ಕರುಣರತ್ನೆ, ಕುಸಾಲ್ ಮೆಂಡೀಸ್(ನಾಯಕ), ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ/ವೆಲ್ಲಲಗೆ, ಏಂಜಲೋ ಮ್ಯಾಥ್ಯೂಸ್, ದುಸ್ಮಂತ ಚಮೀರಾ, ಮಹೀಶ್ ತೀಕ್ಷಣ. ಕಸುನ್ ರಜಿತಾ, ಮಧುಶಂಕ.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್ಸ್ಟಾರ್.