ಟೆಲ್ ಅವೀವ್: ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ವಸಾಹತು ಧೋರಣೆಯನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಗೋಲನ್ನಲ್ಲಿ ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಏಳು ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಸೇರಿವೆ. ಹದಿನೆಂಟು ದೇಶಗಳು ಮತದಾನದಿಂದ ದೂರ ಉಳಿದವು.
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ “ತಕ್ಷಣದ ಹಾಗೂ ನಿರಂತರ ಮಾನವೀಯ ಒಪ್ಪಂದಕ್ಕೆ ಕರೆ ನೀಡುವ ಯುಎನ್ ನಿರ್ಣಯದ ಮೇಲೆ ಭಾರತವು ಮತದಾನದಿಂದ ದೂರ ಉಳಿದಿತ್ತು.ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಯುದ್ಧ ಘೋಷಿಸಿತು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದಾಗಿ ಗಾಜಾದಲ್ಲಿ 11,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.ಗಾಜಾದಲ್ಲಿ ತೆರೆದುಕೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಆದರೆ ಭಯೋತ್ಪದನೆ ಬಗ್ಗೆ ಯಾವುದೇ ಸಂದಿಗ್ಧತೆ ಇರಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.