ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐರ್ಲೆಂಡ್ ಎದುರು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಆದರೆ ಐರ್ಲೆಂಡ್ ಎದುರಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿದ ಬಳಿಕ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ವಾಪಾಸ್ಸಾಗಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಆತಂಕಕ್ಕೆ ಈಡು ಮಾಡಿದೆ.
ಮುಂಬರುವ ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿದ್ದು, ಇದೀಗ ಈ ಕುರಿತಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ.
ಹೌದು, ರೋಹಿತ್ ಶರ್ಮಾ, ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಕೇವಲ 37 ಎಸೆತಗಳನ್ನು ಎದುರಿಸಿ ಅಜೇಯ 52 ರನ್ ಸಿಡಿಸಿದರು. ಇವರ ಈ ಸೊಗಸಾದ ಇನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳು ಸೇರಿದ್ದವು. ಆದರೆ ಐರ್ಲೆಂಡ್ ವೇಗಿ ಜೋಶ್ವಾ ಲಿಟ್ಲ್ ಎಸೆದ ಚೆಂಡು ರೋಹಿತ್ ಶರ್ಮಾ ಭುಜಕ್ಕೆ ಅಪ್ಪಳಿಸಿತ್ತು. ಇದಾದ ಕೆಲ ಹೊತ್ತಿನಲ್ಲೇ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ಗೆ ವಾಪಾಸ್ಸಾಗಿದ್ದರು.