ಲೆಬನಾನ್ನಲ್ಲಿ ಇತ್ತೀಚೆಗೆ ಸಂಘಟಿತ ಪೇಜರ್ ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು ಹಲವರು ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಭಾರತ ಸರ್ಕಾರ ವಿದೇಶದಲ್ಲಿ ಸಿದ್ಧವಾದ ಇಂಥ ಉಪಕರಣಗಳು ಭಾರತದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಅನುಮಾನ ವ್ಯಕ್ತಪಡಿಸಿದೆ. ಭಾರತ ಸರ್ಕಾರವು ಸಿಸಿ ಕ್ಯಾಮೆರಾದಂಥ ‘ಕಣ್ಗಾವಲು ಮಾರುಕಟ್ಟೆ’ಯಲ್ಲಿ ವಿದೇಶಿ ಉಪಕರಣಗಳ ಮೇಲೆ ನಿರ್ಬಂಧ/ನಿಯಂತ್ರಣ ಹೇರಲು ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಪೇಜರ್ ಸ್ಫೋಟಗಳ ಬಳಿಕ ಭಾರತ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಿದೆ. ಸರ್ಕಾರದ ಕಣ್ಗಾವಲು ಕ್ಯಾಮೆರಾ ನೀತಿಯು ಅ.8 ರಂದು ಜಾರಿಗೆ ಬರುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಿಂದ ಚೀನಾದ ಕಂಪನಿಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ ಮತ್ತು ಭಾರತೀಯ ಕಂಪನಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ಸಂಶೋಧನಾ ವಿಶ್ಲೇಷಕ ವರುಣ್ ಗುಪ್ತಾ ಪ್ರತಿಕ್ರಿಯಿಸಿ, ‘ಪ್ರಸ್ತುತ, ಸಿಪಿ ಪ್ಲಸ್, ಹಿಕಿವಿಷನ್ ಮತ್ತು ದಹುವಾ ಎಂಬ ಕಂಪನಿಗಳು ಭಾರತ ಕಣ್ಗಾವಲು ಮಾರುಕಟ್ಟೆಯಲ್ಲಿ ಶೇ.60ರಷ್ಟು ಪಾಲು ಹೊಂದಿವೆ. ಈ ಪೈಕಿ ಸಿಪಿ ಪ್ಲಸ್ ಮಾತ್ರ ಭಾರತದ್ದು. ಉಳಿದವು ಚೀನೀ ಕಂಪನಿಗಳು. ರಾಷ್ಟ್ರೀಯ ಭದ್ರತೆಗೆ ಚೀನೀ ಕಂಪನಿಗಳು ಅಪಾಯ ಎಂಬ ಕಾರಣಕ್ಕೆ ಅಮೆರಿಕದಲ್ಲಿ ಅವನ್ನು ನಿಷೇಧಿಸಲಾಗಿದೆ. ಭಾರತದಲ್ಲೂ ಇದೇ ರೀತಿಯ ಕ್ರಮಗಳ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.