ಬೀಜಿಂಗ್: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ (Asian Games) ಭಾರತ ಇತಿಹಾಸ ಸೃಷ್ಟಿಸಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಸೆಂಚುರಿ ಬಾರಿಸಿದೆ. ಕ್ರೀಡಾಕೂಟ ಆರಂಭವಾದ ದಿನದಿಂದ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ 100 ಪದಕಗಳನ್ನು (100 Medal Mark) ಜಯಿಸಿದ್ದಾರೆ.
ಭಾರತದ (India) ಕ್ರೀಡಾ ಪ್ರಾಧಿಕಾರವು ಈ ಐತಿಹಾಸಿಕ ಸಾಧನೆಗೆ ಕಾರಣಕರ್ತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಏಷ್ಯನ್ ಗೇಮ್ಸ್ನಲ್ಲಿ ಭಾರತವು ತನ್ನ 100 ಪದಕವನ್ನು ಪಡೆಯುತ್ತಿದ್ದಂತೆ ಇತಿಹಾಸವನ್ನು ನಿರ್ಮಿಸಲಾಗಿದೆ. ಟೀಮ್ ಇಂಡಿಯಾ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಕ್ರೀಡಾಪಟುಗಳ ಕನಸುಗಳ ಶಕ್ತಿ, ಸಮರ್ಪಣೆ ಮತ್ತು ತಂಡದ ಕೆಲಸಗಳಿಗೆ ಇದು ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಬರೆದುಕೊಂಡಿದೆ.
ಇದುವರೆಗೆ ಭಾರತಕ್ಕೆ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಸೇರಿದಂತೆ ಒಟ್ಟು 100 ಪದಕಗಳು ಏಷ್ಯನ್ ಗೇಮ್ಸ್ನಲ್ಲಿ ಸಿಕ್ಕಿವೆ. ಶುಕ್ರವಾರ ಕಾಂಪೌಂಡ್ ಆರ್ಚರಿ (3), ಕಬಡ್ಡಿ (2), ಬ್ಯಾಡ್ಮಿಂಟನ್ (1), ಮತ್ತು ಪುರುಷರ ಕ್ರಿಕೆಟ್ (1) ನಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದು 100 ರ ಗಡಿ ತಲುಪಿತ್ತು.
ಇಂಡೋನೇಷ್ಯಾದಲ್ಲಿ ಕಳೆದ ಆವೃತ್ತಿಯಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಅಲ್ಲಿ ದೇಶದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದರು.