ವಾಷಿಂಗ್ಟನ್: ಭಾರತೀಯ- ಅಮೆರಿಕನ್ ರಾಜಕಾರಣಿ, ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಲಿಸಿ, ಚುಡಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ 364 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
49 ವರ್ಷ ವಯಸ್ಸಿನ ಬ್ರೆಟ್ ಫೋರ್ಸೆಲ್ ಎಂಬ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಹ್ಯಾಂಡ್ಗನ್ ಹಿಡಿದು ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ. ಅಲ್ಲದೆ ಕೆಲವೊಮ್ಮೆ ಪ್ರಾಣ ಬೆದರಿಕೆ ಕೂಡ ಹಾಕಿದ್ದ ಎಂದು ಪ್ರಮೀಳಾ ದೂರು ನೀಡಿದ್ದರು.
ಪ್ರಮೀಳಾ ಜಯಪಾಲ್ ಅವರ ಮನೆಯ ಹೊರಗೆ ಬಂದೂಕು ಹಿಡಿದು ನಿಂತಿದ್ದ ಬ್ರೆಟ್ ಫೋರ್ಸೆಲ್ನನ್ನು ಸಿಯಾಟಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣವು ಸಿಯಾಟಲ್ನ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ವೇಳೆ ಬ್ರೆಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.