ನವದೆಹಲಿ: ಇತ್ತೀಚೆಗೆ ಭಾರತೀಯ ಸೇನೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ಸೇರ್ಪಡೆಗೊಂಡಿದ್ದು, ಕೊಚ್ಚಿಯ ನೌಕಾ ನೆಲೆಯಲ್ಲಿ ನಿಯೋಜಿಸಲು ಸಿದ್ಧತೆ ನಡೆದಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದ್ದು, ಭಾರತೀಯ ಸೇನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಭಾರತೀಯ ಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ಗಾಗಿ 34 ಹೊಸ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವ್ ಹೆಲಿಕಾಪ್ಟರ್ಗಳನ್ನು ಖರೀದಿಸುವ ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಪದಾತಿ ದಳದ ಯುದ್ಧ ವಾಹನಗಳನ್ನು (ಟ್ಯಾಂಕರ್ ವಾಹನ) ಮೇಲ್ದರ್ಜೆಗೇರಿಸುವ ಯೋಜನೆಗಳಿಗೂ ಸರ್ಕಾರ ಅನುಮತಿ ನೀಡಿದೆ.
34 ಹೆಲಿಕಾಪ್ಟರ್ಗಳ ಪೈಕಿ ಭಾರತೀಯ ಸೇನೆಯು 25 ಹೆಲಿಕಾಪ್ಟರ್ಗಳನ್ನು ಪಡೆಯಲಿದ್ದು, 9 ಹೆಲಿಕಾಪ್ಟರ್ಗಳನ್ನು ಭಾರತೀಯ ಕೋಸ್ಟ್ ಗಾರ್ಡ್ಗೆ ನೀಡಲಾಗುತ್ತದೆ. ಈ ಹೆಲಿಕಾಪ್ಟರ್ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (HAL) ಸ್ಥಳೀಯವಾಗಿ ಉತ್ಪಾದಿಸಲಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಕೋಸ್ಟ್ಗಾರ್ಡ್ನಲ್ಲಿರುವ ) ಸುಧಾರಿತ ಲಘು ಹೆಲಿಕಾಪ್ಟರ್ಗಳು ಹಳೆಯದ್ದಾದ ಕಾರಣ ಅವುಗಳನ್ನು ಬದಲಾಯಿಸಲು ಇಲಾಖೆ ಮುಂದಾಗಿದೆ. ಅಲ್ಲದೇ ಬಹುನಿಯೋಜಿತ ಕಾರ್ಯಗಳಿಗೆ ಭಾರತೀಯ ಸೇನೆಗೆ ಹೆಲಿಕಾಪ್ಟರ್ಗಳ ಅಗತ್ಯವಿದೆ. ಆದ್ದರಿಂದ ಸರ್ಕಾರ 34 ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಿಗೆ ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಈ ಯೋಜನೆಗೆ ಸುಮಾರು 8,000 ಕೋಟಿ ರೂ. ವೆಚ್ಚ ತಗುಲಲಿದೆ. ಸ್ಥಳಿಯವಾಗಿಯೇ ಹೆಲಿಕಾಪ್ಟರ್ಗಳನ್ನು ನಿರ್ಮಿಸುವುದರಿಂದ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನವೂ ಸಿಗಲಿದೆ. ಸುಧಾರಿತ ಲಘು ಹೆಲಿಕಾಪ್ಟರ್ (ಧ್ರುವ್) 5.5 ಟನ್ಗಳಷ್ಟು ತೂಕ ಹೊಂದಿದೆ. ಸ್ಥಳೀಯವಾಗಿ ಈಗಿನ ಸೇನಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.