ಸಿಂಗಾಪುರ: ಸಿಂಗಾಪುರದ ಅತ್ಯಂತ ಹಳೆಯ ಹಿಂದೂ ದೇವಾಲಯದ ಭಾರತೀಯ ಅರ್ಚಕನಿಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಅರ್ಚಕ ದೇವಾಲಯದ ದೇವತೆಗಳನ್ನು ಅಲಂಕರಿಸಲು ಬಳಸಿದ್ದ 1 ಮಿಲಿಯನ್ ಮೌಲ್ಯದ ಚಿನ್ನಾಭರಣಗಳನ್ನು ಪದೇ ಪದೇ ಗಿರವಿ ಇಟ್ಟು ಹಣ ಪಡೆದ ಆರೋದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
ಸೌತ್ ಬ್ರಿಡ್ಜ್ ರೋಡ್ನಲ್ಲಿರುವ ಶ್ರೀ ಮಾರಿಯಮ್ಮನ್ ದೇವಸ್ಥಾನದ ಅರ್ಚಕ ಕಂದಸಾಮಿ ಸೇನಾಪತಿ ಅವರು ಆಭರಣಗಳನ್ನು ಗಿರವಿ ಇಡುವ ಮೂಲಕ $2.3 ಮಿಲಿಯನ್ (ಸಿಂಗಪೋರಿಯನ್) ಗಳಿಸಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ವಿಚಾರಣೆ ವೇಳೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು ಇದೀಗ ಆರು ವರ್ಷ ಜೈಲು ಶಿಕ್ಷೆಗೊಳಗಾಗಿದ್ದಾರೆ.
ಕಂದಸಾಮಿ ಅವರು ಡಿಸೆಂಬರ್ 2013 ರಲ್ಲಿ ಹಿಂದೂ ದತ್ತಿ ಮಂಡಳಿ ನಲ್ಲಿ ಉದ್ಯೋಗಿಯಾಗಿದ್ದು, ಜುಲೈ 2018 ರಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬಡ್ತಿ ಪಡೆದರು ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನಿಸ್ ಸೀ ನ್ಯಾಯಾಲಯಕ್ಕೆ ತಿಳಿಸಿದ್ದರು.
2014 ರಲ್ಲಿ, ದೇವಾಲಯದ ಪವಿತ್ರ ಗರ್ಭಗುಡಿಯ ಕೀಗಳು ಮತ್ತು ನಂಬರ್ ಕೋಡ್ ಅನ್ನು ಅವರಿಗೆ ವಹಿಸಲಾಯಿತು. ದೇವಳದಲ್ಲಿ ಸುಮಾರು $1.1 ಮಿಲಿಯನ್ (ಸಿಂಗಪೋರಿಯನ್) ಮೌಲ್ಯದ ಸುಮಾರು 255 ಚಿನ್ನಾಭರಣಗಳಿವೆ.