ಅಮೆರಿಕದ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ದೇಶವನ್ನು ಮುನ್ನಡೆಸಲು “ಅರ್ಹರಾಗಿದ್ದಾರೆ” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
81 ವರ್ಷದ ಜೋ ಬೈಡನ್ ಅವರ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕುರಿತಾಗಿ ಹಲವು ಪ್ರಶ್ನೆಗಳು ಎದ್ದಿರುವ ಹೊತ್ತಲ್ಲೇ ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ವಾಷಿಂಗ್ಟನ್, ಡಿಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್, “ಆರಂಭದಿಂದಲೂ, ನನಗೆ ಅವರ ಬಗ್ಗೆ ಯಾವುದೇ ಗೊಂದಲ ಇಲ್ಲ. ಅವರು ಅಧ್ಯಕ್ಷರಾಗಲು ಅರ್ಹರು. ಅದಕ್ಕಾಗಿಯೇ ನಾನು ಅವರನ್ನು ಆಯ್ಕೆ ಮಾಡಿದೆ” ಎಂದು ಹೇಳಿದರು.
ಈ ಬಗ್ಗೆ ಕಾರಣ ತಿಳಿಸಿದ ಬೈಡನ್, “ಮೊದಲನೆಯದಾಗಿ ಅವರು ಮಹಿಳೆಯರ ಸ್ವಾತಂತ್ರ್ಯದ ಸಮಸ್ಯೆಯನ್ನು ನಿಭಾಯಿಸಿದ ರೀತಿ ಮತ್ತು ಎರಡನೆಯದಾಗಿ, ಅವರಿಗೆ ಯಾವುದೇ ಸಮಸ್ಯೆಯನ್ನು ನಿಭಾಯಿಸುವ ಸಾಮರ್ಥ್ಯ ಇದೆ. ಒಂದು ವೇಳೆ ಅವರಿಗೆ ಅಧ್ಯಕ್ಷರಾಗಲು ಅರ್ಹತೆ ಇಲ್ಲ ಎಂದಾಗಿದ್ದರೆ ನಾನು ಉಪಾಧ್ಯಕ್ಷ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ’ ಎಂದಿದ್ದಾರೆ. 59 ವರ್ಷದ ಕಮಲಾ ಹ್ಯಾರಿಸ್ ಅವರು 2020 ರಲ್ಲಿ ಯುಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದಾರೆ.