ಕ್ಷುಲಕ ಕಾರಣಕ್ಕೆ ನಡೆದ ಗಲಾಟೆಯಿಂದ ಕೋಪಗೊಂಡ ಪತಿ ಪತ್ನಿಯನ್ನು ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದಲ್ಲಿ ನಡೆದಿದೆ.
40 ವರ್ಷದ ಭಾರತೀಯ ಮೂಲದ ವ್ಯಕ್ತಿ ನವೀಂದರ್ ಗಿಲ್ ಗೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 2022ರಲ್ಲಿ ನವೀಂದರ್ ಗಿಲ್ ತನ್ನ ಪತ್ನಿ ಹರ್ಪ್ರೀತ್ ಕೌರ್ ರನ್ನು ಇರಿದು ಹತ್ಯೆ ಮಾಡಿದ್ದ.
ದಂಪತಿಗೆ 10 ವರ್ಷದ ಒಳಗಿನ 3 ಮಕ್ಕಳಿದ್ದಾರೆ. 2022ರ ಡಿಸೆಂಬರ್ 7ರಂದು ಸರ್ರೆ ನಗರದ ನಿವಾಸದಲ್ಲಿ ದಂಪತಿಯ ನಡುವೆ ಜಗಳವಾಗಿದ್ದು ನವೀಂದರ್ ಗಿಲ್ ತನ್ನ ಪತ್ನಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಹರ್ಪ್ರೀತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನವೀಂದರ್ ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಘೋಷಿಸಿದ್ದು 10 ವರ್ಷ ಪೆರೋಲ್ ನೀಡಬಾರದು ಎಂದು ಆದೇಶಿಸಿದೆ.