ಅಮೆರಿಕದ ಇಲಿನಾಯ್ಸ್ ಅರ್ಬಾನಾ- ಚಾಂಪೇನ್ ವಿಶ್ವವಿದ್ಯಾಲಯದಲ್ಲಿ (ಯುಐಯುಸಿ) ವ್ಯಾಸಂಗ ಮಾಡುತ್ತಿದ್ದ ಭಾರತೀಯ- ಅಮೆರಿಕನ್ ವಿದ್ಯಾರ್ಥಿ ಅಕುಲ್ ಬಿ. ಧವನ್ ಸಾವಿಗೆ ಅತಿಯಾದ ಮದ್ಯಸೇವನೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 26ರಂದು ನಾಪತ್ತೆಯಾಗಿದ್ದ ಅಕುಲ್ ಬಿ. ಧವನ್ ಶವ 10 ಗಂಟೆಗಳ ಬಳಿಕ ವಿಶ್ವವಿದ್ಯಾಲಯ ಬಳಿಯ ಕಟ್ಟಡದ ಹಿಂಬದಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿಯ ಸಾವಿನ ನಿಖರ ಕಾರಣದ ಪತ್ತೆಗಾಗಿ ತನಿಖೆ ನಡೆಸಿರುವ ಪೊಲೀಸರು, ಅತಿಯಾಗಿ ಮದ್ಯಸೇವನೆ ಹಾಗೂ ದೇಹದಲ್ಲಿ ಸಾಮಾನ್ಯ ಉಷ್ಣತೆ ಪ್ರಮಾಣಕ್ಕಿಂತ ಕಡಿಮೆ ಉಷ್ಣತೆ ಇದ್ದಿದ್ದರಿಂದ ವಿದ್ಯಾರ್ಥಿ ಧವನ್ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್ ರಾಜ್ಯದ ಪೊಲೀಸರು ಮತ್ತು ಚಾಂಪೇನ್ ಕೌಂಟಿ ಕಾರ್ನರ್ನ ಕಚೇರಿ ಮಾಹಿತಿ ನೀಡಿದೆ.
ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸಂಚು ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.