ಲಂಡನ್: ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಫ್ಲ್ಯಾಟ್ ಗೆ ಹೊತ್ತೊಯ್ದು ಅತ್ಯಚಾರ ಎಸಗಿದ್ದ ಭಾರತ ಮೂಲದ ವಿದ್ಯಾರ್ಥಿಯೊರ್ವನಿಗೆ ಬ್ರಿಟನ್ ಸರ್ಕಾರ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ.
20 ವರ್ಷದ ಪ್ರೀತ್ ವಿಕಲ್ ಎಂಬ ವಿದ್ಯಾರ್ಥಿ ಕಳೆದ ವರ್ಷ ಜೂನ್ನಲ್ಲಿ ಪಾನಮತ್ತಳಾಗಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಡಿಫ್ನಲ್ಲಿರುವ ತನ್ನ ಫ್ಲ್ಯಾಟ್ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಯುವತಿಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಯುವತಿ ಪ್ರಜ್ಞಾ ಸ್ಥಿತಿಗೆ ಬಂದ ಬಳಿಕ ಆಕೆಯ ಮೇಲೆ ಅತ್ಯಾಚಾರವಾಗಿರುವುದು ತಿಳಿದುಬಂದಿದೆ. ಕೂಡಲೆ ಆಕೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು, ಅದೇ ದಿನ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ಯುವತಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ದಾಗಿ ತಿಳಿಸಿ, ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ್ದ.
ವಿಕಲ್ನನ್ನು ವಿಚಾರಣೆ ನಡೆಸಿದ ಪೊಲೀಸರು ಮೊದಲಿಗೆ ಆತ ನಿರ್ದೋಷಿ ಎಂದು ಹೇಳಿದ್ದರು. ಆದರೆ ವಿಚಾರಣೆ ವೇಳೆ ಸಂತ್ರಸ್ತೆ ಸಮ್ಮತಿಸಲು ಸಾಧ್ಯವಾಗದಷ್ಟು ಕುಡಿದಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿದ್ದು, ಸಾಕ್ಟು ವಿಚಾರಣೆ ಬಳಿಕ ಕೊನೆಗೆ ವಿಕಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ವಿಕಲ್ಗೆ 6 ವರ್ಷ, 9 ತಿಂಗಳು ಶಿಕ್ಷೆ ವಿಧಿಸಲಾಗಿದೆ.