ಲಂಡನ್: ‘ಭಾರತೀಯ ಪ್ರಜೆ ಮತ್ತು ಹಿಂದೂ ಆದ ಕಾರಣಕ್ಕೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಸ್ಟೂಡೆಂಟ್ಸ್ ಯೂನಿಯನ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನನ್ನನ್ನು ಅನರ್ಹಗೊಳಿಸಲಾಗಿದೆ’ ಎಂದು ಭಾರತೀಯ ಮೂಲದ ಕಾನೂನು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ಲಂಡನ್ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆಯುತ್ತಿರುವ ಹರಿಯಾಣ ಮೂಲದ ಕರಣ್ ಕಠಾರಿಯಾ ಎಂಬ ವಿದ್ಯಾರ್ಥಿ ಇದೀಗ ಲಂಡನ್ ವಿವಿ ಕುರಿತು ಈ ಆರೋಪ ಮಾಡಿದ್ದಾರೆ.
‘ಸ್ಟೂಡೆಂಟ್ಸ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ನನ್ನ ಗೆಳೆಯರ ಬೆಂಬಲ, ಹಾಗೂ ಪ್ರೋತ್ಸಾಹ ಇದೆ. ದುರದೃಷ್ಟಕರ ಸಂಗತಿ ಎಂದರೆ ಭಾರತೀಯ, ಹಿಂದೂ ವಿದ್ಯಾರ್ಥಿಯೊಬ್ಬ ವಿವಿಯ ವಿದ್ಯಾರ್ಥಿ ಸಂಘಟನೆ ಮುನ್ನಡೆಸುವುದನ್ನು ಕೆಲವರು ವೈಯಕ್ತಿಕವಾಗಿ ಸಹಿಸುವುದಿಲ್ಲ. ಹೀಗಾಗಿ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿಕವಾಗಿ ಕುಂದು ತರಲು ಯತ್ನಿಸಿದ್ದು, ವಿವಿಯು ನನ್ನ ಮೇಲೆ ಆಧಾರ ರಹಿತ ಆರೋಪಗಳನ್ನು ಹೊರಿಸಿ, ಚುನಾವಣೆಗೆ ಸ್ಪರ್ಧಿಸದಂತೆ ಕಳೆದ ವಾರ ನನ್ನನ್ನು ಅನರ್ಹಗೊಳಿಸಿದೆ ಎಂದು ದೂರಿದ್ದಾರೆ.
ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದಾಗ ನನ್ನ ಕನಸು ನನಸಾಗಿಸಿಕೊಂಡು, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಿದ್ದೆ. ಆದರೆ, ಭಾರತೀಯ, ಹಿಂದೂ ಎನ್ನುವ ಕಾರಣಕ್ಕೆ ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ, ಯೋಜಿತ ಆರೋಪದ ಅಭಿಯಾನ ನಡೆಸಲಾಗುತ್ತಿದ್ದು, ನನ್ನ ಕನಸು ನಿಧಾನವಾಗಿ ಕಮರುತ್ತಿದೆ’ ಎಂದು ಬೇಸರ ಹೊರ ಹಾಕಿದ್ದಾರೆ.