ನಾವು ಭಾರತೀಯರನ್ನು ಬಂಧಿಸಿಲ್ಲ. ಇಲ್ಲಿ ಹವಾಮಾನ ಸರಿ ಇಲ್ಲದ ಕಾರಣಕ್ಕಾಗಿ ಅವರನ್ನು ಇಲ್ಲಿ ಇರಿಸಲಾಗಿದೆ. ಖಂಡಿತ ಅವರು ಬಯಸಿದಾಗ ಭಾರತಕ್ಕೆ ಹೋಗಬಹುದು ಎಂದು ಇರಾನ್ ರಾಯಭಾರಿ ಇರಾಜ್ ಇಲಾಹಿ ಹೇಳಿದ್ದಾರೆ.
ಇರಾನ್ ವಶಪಡಿಸಿಕೊಂಡಿದ್ದ ಇಸ್ರೇಲ್ಗೆ ಸಂಬಂಧಿಸಿದ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳಿದ್ದರು, ಅವರನ್ನು ಇರಾನ್ ಬಂಧಿಸಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇರಾನ್ ನಾವು ಭಾರತೀಯರನ್ನು ಬಂಧಿಸಿಲ್ಲ. ಇಲ್ಲಿ ಹವಾಮಾನ ಸರಿ ಇಲ್ಲ ಅದಕ್ಕಾಗಿ ಅವರನ್ನು ಇಲ್ಲಿ ಇರಿಸಲಾಗಿದೆ. ಖಂಡಿತ ಅವರು ಬಯಸಿದಾಗ ಭಾರತಕ್ಕೆ ಹೋಗಬಹುದು ಎಂದು ಇರಾನ್ ರಾಯಭಾರಿ ಇರಾಜ್ ಇಲಾಹಿ ಹೇಳಿದ್ದಾರೆ. ಇದೀಗ ಈ ಹೇಳಿಕೆ ಭಾರತ ರಾಜತಾಂತ್ರಿಕತೆಗೆ ಮತ್ತೊಂದು ಜಯ ಎಂದು ಹೇಳಲಾಗಿದೆ.
ಇರಾನ್ ರಾಯಭಾರಿ ಪ್ರಕಾರ, ಪರ್ಷಿಯನ್ ಕೊಲ್ಲಿಯಲ್ಲಿ ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ, ಆ ಕಾರಣದಿಂದ ಹಡಗಿನಲ್ಲಿದ್ದ 17 ಭಾರತೀಯ ಸಿಬ್ಬಂದಿಗಳು ಇಲ್ಲಿದ್ದಾರೆ. ಹವಾಮಾನ ಸುಧಾರಿಸಿದ ನಂತರ ಅವರು ಭಾರತಕ್ಕೆ ಹೋಗಬಹುದು. ಭಾರತಕ್ಕೆ ಹೋಗಲು ಅವರು ಹಡಗನ್ನು ಬಳಸಬಹುದು ಎಂದು ಹೇಳಿದ್ದಾರೆ. ಹಡಗಿನಲ್ಲಿರುವ ರಷ್ಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಇರಾನ್ ತಿಳಿಸಿದೆ.
ಈ ಹಿಂದೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು 17 ಜನ ಭಾರತೀಯ ಸಿಬ್ಬಂದಿಗಳನ್ನು ಭಾರತ ಸರ್ಕಾರಿ ಅಧಿಕಾರಿಗಳು ಭೇಟಿಯಾಗಲು ಅವಕಾಶ ನೀಡಬೇಕು ಹಾಗೂ ಅವರನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್, ಖಂಡಿತವಾಗಿ ಜೈಶಂಕರ್ ನಿಮ್ಮ ಮನವಿಯನ್ನು ಗೌರವಿಸುತ್ತೇವೆ. ಈಗಾಗಗಲೇ ನಾವು ವಶಪಡಿಸಿಕೊಂಡಿರುವ ಹಡಗಿನ ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇವೆ. ನಿಮ್ಮ ಅಧಿಕಾರಿಗಳು ಹಡಗಿನಲ್ಲಿದ್ದ 17 ಭಾರತೀಯರನ್ನು ಭೇಟಿಯಾಗಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಅವರನ್ನು ಬಂಧಿಸಿಲ್ಲ, ಮರಳಿ ಭಾರತಕ್ಕೆ ಕಳುಹಿಸಲಾಗುವುದು ಎಂದು ಇರಾನ್ ಹೇಳಿದೆ.