ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವುದರ ವಿರುದ್ಧ ಪ್ರಬಲ ಪ್ರತಿಭಟನೆಯನ್ನು ಮಾಡಿರುವ ಭಾರತೀಯ ವಲಸಿಗರು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಭಾರತೀಯ ಧ್ವಜವನ್ನು ಅಗೌರವಿಸಿದ ಖಲಿಸ್ತಾನ ಬೆಂಬಲಿಗರ ವಿರುದ್ಧ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಬ್ರಿಟಿಷ್ ಸರ್ಕಾರ ಮತ್ತು ಲಂಡನ್ ಮೇಯರ್ ಸಾದಿಕ್ ಖಾನ್ ಅವರಲ್ಲಿ ಭಾರತೀಯ ವಲಸಿಗರು ಒತ್ತಾಯಿಸಿದ್ದಾರೆ.ಖಲಿಸ್ತಾನಿ ಪರ ಚಟುವಟಿಕೆ ವಿರುದ್ಧ ಬ್ರಿಟನ್ನಲ್ಲಿರುವ ಎನ್ಆರ್ಐಗಳಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗುತ್ತಿರುವುದನ್ನು ವಿರೋಧಿಸಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾರತೀಯ ಧ್ವಜಗಳನ್ನು ಬೀಸುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಹೇಳಿಕೆಗಳನ್ನು ಬಿಡುಗಡೆ ಮಾಡುವ ಬದಲು ಸರ್ಕಾರ ಮತ್ತು ಮೇಯರ್ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರರು ‘ಅವಮಾನಕರ’ ಕೃತ್ಯದ ಬಗ್ಗೆ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು ಧ್ವಜ ಕೆಳಗಿಳಿಸಿದರ ವಿರುದ್ಧ ಸಮುದಾಯವು ಒಗ್ಗಟ್ಟಿನಿಂದ ನಿಂತಿದೆ ಎಂದಿದ್ದಾರೆ.