ವಾಷಿಂಗ್ಟನ್: ಜೂನ್ 20 ರಿಂದ 25ರ ವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಅಮೆರಿಕಾ ಮತ್ತು ಈಜಿಪ್ಟ್’ಗೆ ಪ್ರತ್ಯೇಕ ಭೇಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಮೋದಿ ಭೇಟಿಗೂ ಮುನ್ನವೇ ಶ್ವೇತಭವನದ ಹೊರಗಡೆ ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.
ಶ್ವೇತಭವನದ ಹೊರಗೆ ಭಾರತೀಯ ಧ್ವಜ ರಾರಾಜಿಸುತ್ತಿರುವುದನ್ನು ಕಂಡು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ನ್ಯೂಜೆರ್ಸಿಯಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಜೆಸಲ್ ನಾರ್ ಎಂಬುವವರು ಮಾತನಾಡಿ “ನಮ್ಮ ತ್ರಿವರ್ಣ ಧ್ವಜವನ್ನು ನೋಡುವುದು ನಿಜವಾಗಿಯೂ ಗೌರವ ಮತ್ತು ಹೆಮ್ಮೆಯ ವಿಚಾರ, ಕೆಲಸದ ಉದ್ದೇಶಕ್ಕಾಗಿ ಯುನೈಟೆಡ್ ಸ್ಟೇಟ್ಸ್ನಾದ್ಯಂತ ತಿರುಗಾಡುವಾಗ ನಾನು ತ್ರಿವರ್ಣ ಧ್ವಜವನ್ನು ತೆಗೆದುಕೊಂಡೇ ಹೋಗುತ್ತಿರುತ್ತೇನೆ” ಎಂದು ಹೇಳಿದ್ದಾರೆ. “ಶ್ವೇತಭವನದ ಮುಂದೆ ತ್ರಿವರ್ಣ ಧ್ವಜವು ಮುಕ್ತವಾಗಿ ಹಾರಾಡುತ್ತಿರುವುದನ್ನು ನೋಡಿದಾಗ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿಯವರು ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುವುದನ್ನು ಸೂಚಿಸುತ್ತಿದೆ. ಭಾರತದಲ್ಲಿ ಹೆಚ್ಚಿನ ತಾಂತ್ರಿಕ ಪ್ರಗತಿ ಸಾಧಿಸಲು ಈ ಭೇಟಿಯು ಹೆಚ್ಚು ಮಹತ್ವದಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲು ಸಿದ್ಧರಾಗಿರುವ ಮೋದಿ, ಜೂನ್ 20-24 ರವರೆಗೆ ಯುಎಸ್ ಕಾಂಗ್ರೆಸ್ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ, ಹಲವಾರು ಅಮೆರಿಕನ್ ರಾಜಕಾರಣಿಗಳು, ಪ್ರಮುಖ ನಾಗರಿಕರು ಮತ್ತು ವಲಸೆಗಾರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಮಧ್ಯೆ, ಶ್ವೇತಭವನದ ದಕ್ಷಿಣ ಲಾನ್ನಲ್ಲಿ ಪ್ರಧಾನಿ ಮೋದಿ ಔಪಚಾರಿಕ ಸ್ವಾಗತಕ್ಕಾಗಿ ತಯಾರಿ ಭರದಿಂದ ನಡೆಯುತ್ತಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ನ್ಯೂಯಾರ್ಕ್ಕ್ಕೆ ಭೇಟಿ ನೀಡಲಿದ್ದು, ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವವನ್ನ ವಹಿಸಲಿದ್ದಾರೆ. ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಜೂನ್ 22 ರಂದು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಲಿದ್ದಾರೆ. ಬಳಿಕ, ಉನ್ನತ ಮಟ್ಟದ ಮಾತುಕತೆ ನಡೆಸುವ ಸಲುವಾಗಿ ಅಧ್ಯಕ್ಷ ಬೈಡನ್ ಅವರನ್ನು ಭೇಟಿ ಮಾಡಲಿದ್ದಾರೆ.