ಹುಬ್ಬಳ್ಳಿ: ಬಡವರ, ಆರ್ಥಿಕವಾಗಿ ಹಿಂದುಳಿದವರ ಹಸಿವನ್ನು ನೀಗಿಸುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ನಡೆ ನಿಜಕ್ಕೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಡವರ ಹೊಟ್ಟೆಯ ಮೇಲೆ ಬರೆ ಹಾಕುವ ಕೆಲಸವನ್ನು ಮಾಡುತ್ತಿರುವ ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅವರು, ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹೆಸರು ಇರುವ ಕಾರಣಕ್ಕೆ ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಮೂಲಕ ಉಪಹಾರ, ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ. ಇದು ಸಾರ್ವಜನಿಕರ ಹಾಗೂ ಬಡವರಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ ಎಂದರು.
ಹಸಿವು ಮುಕ್ತ ರಾಜ್ಯ ನಿರ್ಮಾಣದ ಕನಸನ್ನು ಕಂಡಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸುಮಾರು ನಾಲ್ಕು ನೂರು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿತ್ತು. ಬಡವರು, ವಿದ್ಯಾರ್ಥಿಗಳು, ಆಟೋ ಚಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ರಾಜಕೀಯ ಉದ್ದೇಶದಿಂದ ಮುಚ್ಚಲು ಹೊರಟಿರುವುದು ನಿಜಕ್ಕೂ ಜನ ವಿರೋಧಿ ನಡೆಯಾಗಿದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಮುಚ್ಚಕೂಡದು ಎಂದು ಎಚ್ಚರಿಕೆ ನೀಡಿದರು.
ಸರಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಹಲವು ಕ್ಯಾಂಟೀನ್ಗಳಿಗೆ ಬೀಗ ಬಿದ್ದಿದೆ. ಬಿಬಿಎಂಪಿ ವ್ಯಾಪ್ತಿಯ 185 ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆ ಗುತ್ತಿಗೆಯನ್ನು ಶೆಫ್ಟಾಕ್, ರಿವಾರ್ಡ್ಸ್ ಮತ್ತು ಅದಮ್ಯ ಚೇತನ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಸ್ಥಳಾವಕಾಶದ ಕೊರತೆ ಇರುವ ವಾರ್ಡ್ಗಳಲ್ಲಿ ಮೊಬೈಲ್ ಕ್ಯಾಂಟೀನ್ಗಳ ಮೂಲಕ ಊಟ, ತಿಂಡಿ ವಿತರಿಸಲಾಗುತ್ತಿತ್ತು. ಮೊಬೈಲ್ ಕ್ಯಾಂಟೀನ್ಗಳನ್ನ ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಈದೀಗ ಕೆಲವೊಂದು ಸ್ಥಿರ ಕ್ಯಾಂಟೀನ್ಗಳ ಬಾಗಿಲು ಸಹ ಮುಚ್ಚಲಾಗಿದೆ.
ಕ್ಯಾಂಟೀನ್ನಿಂದ ಒಲವು ಕಳೆದುಕೊಂಡ ಜನ
ಅದಮ್ಯ ಚೇತನಕ್ಕೆ 40, ಶೆಫ್ಟಾಕ್ಗೆ 92 ಮತ್ತು ರಿವಾರ್ಡ್ಸ್ ಸಂಸ್ಥೆಗೆ 40 ಕ್ಯಾಂಟೀನ್ಗಳನ್ನಷ್ಟೇ ಗುತ್ತಿಗೆ ನೀಡಲಾಗಿತ್ತು. ಆ ಸಂಸ್ಥೆಗಳು ಸಹ ಇಷ್ಟು ಕ್ಯಾಂಟೀನ್ಗಳನ್ನ ನಿರ್ವಹಿಸುತ್ತಿವೆ. ಈ ಪೈಕಿ ಕೆಲವೊಂದು ಕ್ಯಾಂಟೀನ್ಗಳಲ್ಲಿ ರಾತ್ರಿ ಊಟವನ್ನ ಸ್ಥಗಿತಗೊಳಿಸಿವೆ. ಗುಣಮಟ್ಟದ ಹಾಗೂ ರುಚಿಕರ ಆಹಾರ ದೊರಕದ ಹಿನ್ನೆಲೆ ಬಹುತೇಕರು ಕ್ಯಾಂಟೀನ್ಗಳತ್ತ ಸುಳಿಯುತ್ತಿಲ್ಲ. ಕ್ಯಾಂಟೀನ್ಗಳಲ್ಲಿ ತಿಂಡಿ, ಊಟ ಮಾಡುತ್ತಿದ್ದವರ ಸಂಖ್ಯೆಯೂ ಸಹ ಗಣನೀಯವಾಗಿ ಇಳಿಕೆಯಾಗಿತ್ತಿದೆ.
ಕ್ಯಾಂಟೀನ್ಗಳ ನಿರ್ವಹಣೆಯ ಹೊಣೆ ಹೊತ್ತ ಸಂಸ್ಥೆಗಳಿಗೆ 2022ರ ಆಗಸ್ಟ್ ತಿಂಗಳಿನಿಂದಲೂ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡಿದೆ. ಹಿಗಾಗಿ ನಿರ್ವಹಣೆ ಹೊತ್ತ ಸಂಸ್ಥೆಗಳು ಶುಚಿ, ರುಚಿಯಾದ ಮತ್ತು ಆಯ್ಕೆಯ ಆಹಾರಗಳನ್ನ ನೀಡುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ರಾತ್ರಿ ಊಟ ಸ್ಥಗಿತಗೊಳಿಸಿದ 10 ಕ್ಯಾಂಟೀನ್ಗಳು
ರಿವಾರ್ಡ್ಸ್ ಸಂಸ್ಥೆಯು 49 ಕ್ಯಾಂಟೀನ್ಗಳ ನಿರ್ವಹಣೆಯ ಗುತ್ತಿಗೆ ಪಡೆದಿದೆ. ಇದರಲ್ಲಿ ಒಂಬತ್ತು ಕ್ಯಾಂಟೀನ್ಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ಸಂಸ್ಥೆಗೆ ಸುಮಾರು 15 ಕೋಟಿ ರೂ. ಬಿಲ್ ಅನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಶೆಫ್ಟಾಕ್ ಸಂಸ್ಥೆ 96ರ ಪೈಕಿ 92 ಕ್ಯಾಂಟೀನ್ಗಳನ್ನಷ್ಟೇ ನಿರ್ವಹಣೆಯನ್ನ ಮಾಡುತ್ತಿದೆ. ಅದಮ್ಯ ಚೇತನ ಸಂಸ್ಥೆ 40 ಕ್ಯಾಂಟೀನ್ಗಳ ಪೈಕಿ 30 ಕ್ಯಾಂಟೀನ್ನಲ್ಲಿ ಊಟ ನೀಡುತ್ತಿದೆ. ಆದರೆ 10 ಕ್ಯಾಂಟೀನ್ಗಳಲ್ಲಿ ರಾತ್ರಿ ಊಟ ನೀಡುವುದನ್ನು ನಿಲ್ಲಿಸಿದೆ.